ಉಡುಪಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ಅಗತ್ಯ ಇರುವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಸೂಚನೆ ನೀಡಿದರು.
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಭತ್ತದ ಬೆಂಬಲ ಬೆಲೆಯ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಯ ನೋಂದಣಿ ಕಾರ್ಯ ಈಗಾಗಲೇ ಆರಂಭವಾಗಿದ್ದು, ರೈತರು ಅ. 31 ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಸಾಮಾನ್ಯ ಭತ್ತಕ್ಕೆ 2369 ಹಾಗೂ ಗ್ರೇಡ್ ಎ ಭತ್ತಕ್ಕೆ 2389 ರೂ. ನಿಗದಿಪಡಿಸಲಾಗಿದ್ದು, ಉಡುಪಿ ಹಾಗೂ ಕಾರ್ಕಳದ ಎ.ಪಿ.ಎಂ.ಸಿ ಯಾರ್ಡ್ ಮತ್ತು ಕೋಟೇಶ್ವರದ ಕೆ.ಎಫ್.ಸಿ.ಎಸ್.ಸಿ ಗೋದಾಮಿನಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.
ರೈತರು ಬೆಳೆದಿರುವ ಧಾನ್ಯಗಳಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೂಟ್ಸ್ ದತ್ತಾಂಶದಿಂದ ಬೆಳೆ ಮಾಹಿತಿಯನ್ನು ನೇರವಾಗಿ ಪಡೆದು ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಯನ್ವಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿದ ರೈತರಿಂದ ಭತ್ತವನ್ನು ಖರೀದಿಸುವಂತೆ ಸೂಚಿಸಿದರು.
ಖರೀದಿಯಾಗುವ ಭತ್ತವನ್ನು ಗೋದಾಮುಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಅಗತ್ಯ ಕ್ರಮ ವಹಿಸಬೇಕು. ಭತ್ತ ಖರೀದಿ ನೋಂದಣಿ ಪ್ರಾರಂಭವಾಗಿರುವ ಬಗ್ಗೆ ಗ್ರಾಮೀಣ ಭಾಗದ ರೈತರಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಪ್ರಚಾರ ನೀಡಬೇಕು ಎಂದರು.
ಭತ್ತವನ್ನು ಸರಬರಾಜು ಮಾಡುವ ರೈತರ ಬ್ಯಾಂಕ್‌ಗಳಿಗೆ ಹಣವನ್ನು ಡಿ.ಬಿ.ಟಿ ನೇರ ನಗದು ವರ್ಗಾವಣೆ ಮಾಡಲು ಕ್ರಮವಹಿಸಬೇಕು ಎಂದ ಅವರು, ಪ್ರತೀ ರೈತರಿಂದ ಪ್ರತೀ ಎಕರೆಗೆ 25 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್ ಖರೀದಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕದ್ರೋಳ್ಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮಾ ಜೆ.ಸಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಜು ಎಂ.ಎಸ್,ಆಹಾರ ಇಲಾಖೆಯ ಉಪನಿರ್ದೇಶಕಿ ರಶ್ಮಿ ಇದ್ದರು.