ಉಡುಪಿ: ಜನ ಸಾಮಾನ್ಯರಿಗೆ ಶುದ್ಧ ಕುಡಿವ ನೀರು ಒದಗಿಸುವ ಜಲ್ ಜೀವನ್ ಮಿಷನ್ ಯೋಜನೆ ಅಡಿ ಜಿಲ್ಲೆಯ 19ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಗಳು ಸಮಾಧಾನಕರವಾಗಿಲ್ಲ ಎಂಬ ನಿರ್ಣಯವನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ ಈ ಬಗ್ಗೆ ವರದಿ ನೀಡಬೇಕೆಂದು ಎಂಜಿನಿಯರ್ ಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಸೂಚನೆ ನೀಡಿದರು.
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಜನರಿಗೆ ಶುದ್ಧ ನೀರು ಕುಡಿಯಬೇಕೆಂಬ ಆಶಯದೊಂದಿಗೆ ಜಲ್ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 687 ಕೋಟಿ ರೂ. ಮೊತ್ತದಲ್ಲಿ 525 ಕಾಮಗಾರಿಗಳನ್ನು ಕೈಗೊಂಡಿದ್ದು, ಅವುಗಳಲ್ಲಿ 487 ಪೂರ್ಣಗೊಂಡಿದ್ದು, 38 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೇ.93 ರಷ್ಟು ಸಾಧನೆಯಾಗಿದೆ. ಆದರೆ ಉಡುಪಿ ತಾಲೂಕಿನ 19 ಗ್ರಾಮ ಪಂಚಾಯತ್‌ಗಳಲ್ಲಿ ಕಾಮಗಾರಿಗಳು ಸರಿಯಾಗಿ ಆಗಿಲ್ಲವೆಂದು ಗ್ರಾಮ ಪಂಚಾಯತ್ ಸಭೆಗಳಲ್ಲಿ ನಿರ್ಣಯ ಕೈಗೊಂಡಿದ್ದು, ಇದರ ವರದಿಯನ್ನು ತಾಂತ್ರಿಕವಾಗಿ ಅಥವಾ ಗುಣಮಟ್ಟದಲ್ಲಿ ಆಗಿದಿಯೇ ಎಂಬ ಬಗ್ಗೆ ಪರಿಶೀಲಿಸಿ, ನೀಡಬೇಕೆಂದು ತಿಳಿಸಿದರು.
ಕೊಲ್ಲೂರಿನಿಂದ ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅಡೆತಡೆ ಆಗಿರುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಪರಿಹಾರ ಕಾರ್ಯವನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ವೇಗವನ್ನು ಹೆಚ್ಚಿಸುವುದರೊಂದಿಗೆ ಗುಣಮಟ್ಟದೊಂದಿಗೆ ನಿಗಧಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಬೀಡಾಡಿ ದನಗಳ ಕಳ್ಳತನ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಕೊಲ್ಲೂರು ಭಾಗದಲ್ಲಿ ಹೆಚ್ಚು ಬೀಡಾಡಿ ದನಗಳು ಇವೆ. ಇವುಗಳ ಪಾಲನೆ ಮಾಡಲು ಅನುಕೂಲವಾಗುವಂತೆ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಸಹಭಾಗಿತ್ವದಲ್ಲಿ ಗೋಶಾಲೆಯನ್ನು ತೆರೆಯಲು ಈಗಾಗಲೇ ಜಾಗವನ್ನು ಗುರುತಿಸಲಾಗಿದೆ. ಇದರ ಅನುಷ್ಠಾನ ಆಗಬೇಕೆಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಶಾಸಕ ಯಶ್‌ಪಾಲ್ ಸುವರ್ಣ ಅವರು ಮಾತನಾಡಿ, ಜಲ್ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಕೈಗೊಂಡಿರುವ ಕೆಲವು ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿದರೆ ಕೆಲವುಗಳು ಅವೈಜ್ಞಾನಿಕವಾಗಿದ್ದು, ಜನಸಾಮಾನ್ಯರಿಗೆ ಅದರ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಉಡುಪಿ ತಾಲೂಕಿನ ಸಾಕಷ್ಟು ಗ್ರಾಮ ಪಂಚಾಯತ್‌ಗಳಲ್ಲಿ ಕಾಮಗಾರಿ ಸರಿಯಾಗಿ ಆಗಿಲ್ಲ ಎಂದು ಪಂಚಾಯತ್ ಸಭೆಗಳಲ್ಲಿ ನಿರ್ಣಯ ಕೈಗೊಂಡಿದ್ದಾರೆ. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಸಭೆಯ ಗಮನಕ್ಕೆ ತಂದರು.
ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಕೊರಗ ಜನಾಂಗದವರು ಸರಕಾರದ ಸೌಲಭ್ಯಗಳನ್ನು ಪಡೆಯಲು ಮುಂದೆ ಬರುವುದಿಲ್ಲ. ಅದರಲ್ಲೂ ವಿಶೇಷವಾಗಿ ವಸತಿ ಸೌಲಭ್ಯವು ಅವರುಗಳಿಗೆ ಅಗತ್ಯವಿದೆ. ಸಂಬಂಧಪಟ್ಟ ಇಲಾಖೆಯವರು ಅವರುಗಳಿದ್ದಲ್ಲಿಯೇ ಹೋಗಿ ಗುರುತಿಸಿ, ಸೌಲಭ್ಯವನ್ನು ಕೊಡಬೇಕು. ಸರಕಾರ ನೀಡುತ್ತಿರುವ ಅನುದಾನದಲ್ಲಿ ವ್ಯವಸ್ಥಿತ ಮನೆಯನ್ನು ಕಟ್ಟಲು ತೊಂದರೆ ಉಂಟಾಗುತ್ತದೆ. ಖಾಸಗಿ ಎನ್.ಜಿ.ಓ ಗಳ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವುದು ಒಳಿತು ಎಂದರು.
ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರಾಜ್ಯ ಸರಕಾರ ಕೆಲವು ಬಿ.ಪಿ.ಎಲ್ ಕಾರ್ಡ್ಗಳನ್ನು ರದ್ದುಪಡಿಸಲು ಮುಂದಾಗಿದೆ. ರದುಪಡಿಸುವ ಮುನ್ನ ಸರಿಯಾದ ಮಾನದಂಡಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಆದರೆ ಇವುಗಳ ಪರಿಶೀಲನೆ ಮಾಡದೇ ರದ್ದುಪಡಿಸಿರುವುದರಿಂದ ಕೆಲವು ಸಾರ್ವಜನಿಕರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸಬೇಕು. ಪಡಿತರ ರದ್ದುಪಡಿಸಲು ಸರ್ಕಾರ ಯಾವುದೇ ಲಿಖಿತ ಪತ್ರವನ್ನು ಸಹ ನೀಡಿರುವುದಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಟಪಾಡಿ ಜಂಕ್ಷನ್ ಅಂಡರ್‌ಪಾಸ್ ಕಾಮಗಾರಿ ಕೈಗೊಳ್ಳಲು ಈಗಾಗಲೇ ಕೇಂದ್ರ ಸರ್ಕಾರದಿಂದ ಮಂಜೂರಾತಿ ಲಭ್ಯವಾಗಿದೆ. ಕಾಮಗಾರಿಗೆ ಅಗತ್ಯವಿರುವ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳುವುದರೊಂದಿಗೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕು. ಕಾಮಗಾರಿ ಸಂದರ್ಭದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಧಕ್ಕೆಯಾಗದಂತೆ ಅಗತ್ಯ ಪರ್ಯಾಯ ಮಾರ್ಗಗಳನ್ನು ಕಲ್ಪಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಕಾರ್ಕಳ ವೈಲ್ಡ್ಲೈಫ್ ಡಿ.ಎಫ್.ಓ ಶಿವರಾಮ್ ಎಂ ಬಾಬು, ಸಮಿತಿ ಸದಸ್ಯರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಇದ್ದರು.