ಮಂಗಳೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂ.ಎಸ್.ಎಂ.ಇ ನಿರ್ದೇಶನಾಲಯ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ , ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ , ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು ಹಾಗೂ ಜಿಲ್ಲಾ ಸಣ್ಣ ಉದ್ಯಮಗಳ ಅಸೋಸಿಯೇಷನ್ ಆಶ್ರಯದಲ್ಲಿ ರ‍್ಯಾಂಪ್ ಯೋಜನೆ ಅಡಿಯಲ್ಲಿ ಒಂದು ದಿನದ ಟ್ರೆಡ್ಸ್ ಹಾಗೂ ಇ.ಎಸ್.ಎಂ ಅರಿವು ಕಾರ್ಯಕ್ರಮವನ್ನು ಜಿಲ್ಲಾ ಸಣ್ಣ ಉದ್ಯಮಗಳ ಅಸೋಸಿಯೇಷನ್ ಹಾಲ್‍ನಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಶೈಲೇಂದ್ರನಾಥ ಅವರು ಉದ್ಘಾಟಿಸಿ ಮಾತನಾಡಿ, ಕೆನರಾ ಬ್ಯಾಂಕ್‍ನಿಂದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಶೀಲರಿಗೆ ಸಿಗುತ್ತಿರುವ ಹಣಕಾಸು ಸೌಲಭ್ಯಗಳ ಬಗ್ಗೆ ತಿಳಿಸಿದರು.
ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಿದ್ದರಾಜು ಅವರು ಮಾತನಾಡಿ, ಭಾರತ ಸರ್ಕಾರದ ರ‍್ಯಾಂಪ್ ಯೋಜನೆ ಉದ್ದೇಶ ಹಾಗೂ ಮುಖ್ಯಾಂಶ ತಿಳಿಸಿ, ಉದ್ಯಮಶೀಲತೆ ಬೆಳಸಿಕೊಳ್ಳುವ ಮೂಲಕ ಆರ್ಥಿಕ ಸಬಲತೆಗೆ ಸರಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ ಎಂದರು.
ಕೆನರಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಅರುಣ ಪಡಿಯಾರ ಅವರು ಮಾತನಾಡಿ, ಯೋಜನೆ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಶೀಲರಿಗೆ ದುಡಿಮೆ ಬಂಡವಾಳ ನಿರ್ವಹಣೆಗೆ ತುಂಬಾ ಉಪಯುಕ್ತವಾಗಿದ್ದು, ಉದ್ಯಮಶೀಲರು ಈ ಯೋಜನೆ ಲಾಭ ಪಡೆಯಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್ ಮಾತನಾಡಿ, ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಪಾತ್ರ ಹಾಗೂ ಸೌಲಭ್ಯಗಳನ್ನು ಹೇಗೆ ಉದ್ಯಮಶೀಲರು ಪಡೆದು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ತಾಂತ್ರಿಕ ಅಧಿವೇಶನದಲ್ಲಿ ಬ್ಯಾಂಕ್ ನಿವೃತ್ತ ಅಧಿಕಾರಿ ಆರ್. ಕೆ. ಬಾಲಚಂದ್ರ ಅವರು ಟ್ರೆಡ್ಸ್ ಸೌಲಭ್ಯದ ಉದ್ದೇಶ, ನೋಂದಣಿ, ಕೆ.ವೈ.ಸಿ, ಖರೀದಿದಾರ ಹಾಗೂ ಬ್ಯಾಂಕ್‍ಗಳ ಪಾತ್ರ, ಮಾರಾಟಗಾರ ಹಾಗೂ ಬ್ಯಾಂಕ್‍ಗಳ ಪಾತ್ರ, ಅನ್ವಯಿಸುವ ಷರತ್ತುಗಳು ಮುಂತಾದ ವಿಷಯದ ಬಗ್ಗೆ ಉದ್ಯಮಶೀಲರಿಗೆ ಮಾಹಿತಿ ನೀಡಿದರು.
ನಿವೃತ್ತ ಮಿಲಿಟರಿ ಎಂಜಿನಿಯರಿಂಗ್ ಅಧಿಕಾರಿ ಭಾನುಪ್ರತಾಪ ಸಿಂಗ್ ಇ.ಎಸ್.ಎಂ ಬಗ್ಗೆ ಉದ್ಯಮಶೀಲರಿಗೆ ಮಾಹಿತಿ ನೀಡಿದರು. ಡಾ. ಜಯಾ ಶೆಟ್ಟಿ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಶೀಲರು ಡಿಜಿಟ್‍ಲೈಜೇಶನ್ ಬಗ್ಗೆ ಮಾಹಿತಿ, ಅದರ ಪ್ರಾಮುಖ್ಯತೆ, ಪ್ರಯೋಜನಗಳು ಹಾಗೂ ಅದನ್ನು ತಮ್ಮ ಉದ್ಯಮಗಳಲ್ಲಿ ಹೇಗೆ ಉಪಯೋಗಿಸಿಕೊಳ್ಳಬಹುದೆಂಬ ಮಾಹಿತಿ ನೀಡಿದರು.
ಸಿಡಾಕ್ ನಿವೃತ್ತ ಜಂಟಿ ನಿರ್ದೇಶಕ ಅರವಿಂದ ಡಿ. ಬಾಳೇರಿ, ಸ್ವಾಗತಿಸಿದರು. ಪ್ಲಾಸ್ಟಿಕ್ ಉದ್ಯಮಿಗಳ ಸಂಘದ ಅಧ್ಯಕ್ಷ ನಜೀರ್, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಧನಂಜಯ ಪಾಟೀಲ, ಮಹಿಳಾ ವಿಭಾಗದ ಹಿಂದಿನ ಡಿ.ಎಸ್.ಐ.ಎ ಅಧ್ಯಕ್ಷೆ ಹರೀನಾ ರಾವ್ ಇದ್ದರು. ಸಿಡಾಕ್ ಉಪ ನಿರ್ದೇಶಕ ಎಸ್.ವಿ. ಎಲಿಗಾರ ನಿರೂಪಿಸಿ ವಂದಿಸಿದರು.