Breaking News
KARAVALIDAILYNEWS

ಕಾರವಾರಜಿಲ್ಲೆಶಿರಸಿ

ಮಾದಕ ವಸ್ತುಗಳ ಮಾರಾಟ, ಬಳಕೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

 

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟವನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜತೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಎನ್‌ಕಾರ್ಡ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೃಷಿ ಭೂಮಿಗಳ ಮಧ್ಯದಲ್ಲಿ ಇತರ ಬೆಳೆಗಳ ಜತೆ ಗಾಂಜಾ ಬೆಳೆಗಳನ್ನು ಬೆಳೆವ ಸಾಧ್ಯತೆ ಇರುವುದರಿಂದ ಬೆಳೆ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಸಿಬ್ಬಂದಿ ಗಾಂಜಾ ಬೆಳೆದಿರುವುದು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಪ್ರಸ್ತುತ ಕಬ್ಬು ಕಟಾವು ಪ್ರಾರಂಭವಾಗಿದ್ದು, ಈ ಪ್ರದೇಶಗಳಲ್ಲಿ ಕೂಡ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆ ಕಂಡು ಬಂದಲ್ಲಿ ಬೀಟ್ ವ್ಯವಸ್ಥೆಯಲ್ಲಿರುವ ಸಿಬ್ಬಂದಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅರಣ್ಯ ವೀಕ್ಷಕರಿಗೆ ಮಾದಕ ವಸ್ತುಗಳ ತಡೆಗಟ್ಟುವ ಬಗ್ಗೆ ಮತ್ತು ಗಾಂಜಾ ಸಸಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.
ಜಿಲ್ಲೆಯಲ್ಲಿರುವ ರೆಸಾರ್ಟ್ ಮತ್ತು ಹೊಂ ಸ್ಟೇಗಳ ಮಾಲೀಕರಿಗೆ ತಮ್ಮ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಬಳಕೆಗೆ ಅವಕಾಶ ನೀಡದ ಕುರಿತಂತೆ ಜಾಗೃತಿ ಮೂಡಿಸಬೇಕು ಹಾಗೂ ಪ್ರವಾಸಿ ತಾಣಗಳಲ್ಲಿ ಮಾದಕ ವಸ್ತಗಳ ನಿಷೇಧದ ಕುರಿತು ಪೋಸ್ಟರ್ ಅಳವಡಿಕೆ ಮಾಡುವಂತೆ ತಿಳಿಸಿದ ಅವರು ಹೊಟೇಲ್ ಮತ್ತು ಹೊಂಸ್ಟೇಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಬೇಕು ಸಿಸಿಟಿವಿ ಕಾರ್ಯನಿರ್ವಹಿಸದಿದ್ದರೆ ಪರವಾನಿಗೆ ನವೀಕರಣದ ಸಮಯದಲ್ಲಿ ಸಿಸಿಟಿವಿ ಕಾರ್ಯನಿರ್ವಹಣೆ ಬಗ್ಗೆ ಖಜಿತಪಡಿಸಿಕೊಂಡು ಪರವಾನಗಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

  1.  

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರು ಮಾತನಾಡಿ, ಜಿಲ್ಲೆಗೆ ಹೊರ ರಾಜ್ಯಗಳಿಂದ ಮಾದಕ ವಸ್ತುಗಳು ಸರಬರಾಜಾಗುತ್ತಿದ್ದು, ಸ್ಥಳೀಯ ಪ್ಲೆಡ್ಲರ್‌ಗಳು ಮತ್ತು ಪ್ರವಾಸಿಗರು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗುತ್ತಿರುವುದು ಕಂಡು ಬರುತ್ತಿದೆ, ಈ ಸಂಬಂಧ ಎಲ್ಲ ತಾಲೂಕುಗಳಲ್ಲಿ ಟೆಸ್ಟಿಂಗ್ ಕಿಟ್ ಇಡಲಾಗಿದ್ದು, 2025ರ ಸಾಲಿನಲ್ಲಿ ಮಾದಕ ವಸ್ತುಗಳ ಸೇವನೆ ಕುರಿತಂತೆ 126 ಪ್ರಕರಣ ದಾಖಲಿಸಿ 154 ಮಂದಿ ಬಂಧನ ಮಾಡಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಪ್ರಮುಖ ಸಾರ್ವಜನಿಕ ಸ್ಥಳ ಮತ್ತು ಪ್ರವಾಸಿ ತಾಣಗಳಲ್ಲಿ ಕ್ಯೂಆರ್ ಕೋಡ್ ಸ್ಟೀಕರ್ ಅಳವಡಿಸಲಾಗುತ್ತಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಾರ್ವಜನಿಕರು ಮಾದಕ ವಸ್ತುಗಳ ಸೇವನೆ ಮಾಡುವವರ ಅಥವಾ ಮಾರಾಟ ಮಾಡುವವರ ಮಾಹಿತಿ ನೀಡಬಹುದಾಗಿದ್ದು, ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದರು.
ಎಲ್ಲ ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯ ವಿರೋಧಿ ಸಮಿತಿಯನ್ನು ಕಡ್ಡಾಯವಾಗಿ ರಚನೆ ಮಾಡುವಂತೆ ತಿಳಿಸಿದ ಅವರು ಈ ಬಗ್ಗೆ ಎಲ್ಲಾ ಶಾಲಾ ಕಾಲೇಜುಗಳು ಸಮಿತಿಯನ್ನು ರಚನೆಯಾಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವಂತೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸಿದರು.

ಅಬಕಾರಿ ಇಲಾಖೆ, ಕರಾವಳಿ ಕಾವಲು ಪಡೆ, ಇಂಡಿಯನ್ ಕೋಸ್ಟ್ ಗಾರ್ಡ್ ಹಾಗೂ ರೈಲ್ವೆ ಪೊಲೀಸ್ ರಿಗೆ ಮಾದಕ ವಸ್ತುಗಳ ನಿಯಂತ್ರಣದ ಬಗ್ಗೆ ಹೆಚ್ಚಿನ ಅಧಿಕಾರ ಇರುವುದರಿಂದ ತಮ್ಮ ಹಂತದಲ್ಲಿ ಮಾದಕ ವಸ್ತುಗಳ ಸರಬರಾಜು ಮತ್ತು ಸೇವನೆ ಕಂಡು ಬಂದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸಿ, ಅವರ ವಿವರವನ್ನು ಪೊಲೀಸ್ ಇಲಾಖೆಗೆ ನೀಡುವಂತೆ ತಿಳಿಸಿದ ಅವರು, ಕಾರವಾರ, ಗೋಕರ್ಣ ಮತ್ತು ಮುರ್ಡೇಶ್ವರದಂತಹ ಪ್ರಮುಖ ರೈಲ್ವೆ ನಿಲ್ದಾಣದಲ್ಲಿ ಅತ್ಯಾಧುನಿಕ ಫೇಸ್ ರೆಕಗ್ನೇಷನ್ ಕ್ಯಾಮೆರಾಗಳನ್ನು ಅಳವಡಿಸುವಂತೆ ರೈಲ್ವೆ ಪೊಲೀಸ್‌ರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಕೋಸ್ಟ್ ಗಾರ್ಡ್ ಅಧಿಕಾರಿಗಳು, ರೈಲ್ವೆ ಪೊಲೀಸ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

  1.  

Related posts

ತೈಲ ಬಿಸಿ, ಕರಾವಳಿಯಲ್ಲಿ ಹೆಚ್ಚಿದ ಬಿಜೆಪಿ ಆಕ್ರೋಶ, ರಸ್ತೆ ತಡೆ ಪ್ರತಿಭಟನೆ

Karavalidailynews

ನನ್ನ ತಂಗಿಯಿಂದ ಜೀವ ಬೆದರಿಕೆ, ರಕ್ಷಣೆ ನೀಡಲು ಪೊಲೀಸರಿಗೆ ಪ್ರಫುಲ್ಲ ನಾಯ್ಕ್ ಮನವಿ

Karavalidailynews

ಜಾತಿ ಪ್ರಮಾಣ ಪತ್ರ ನೀಡದೇ ವಂಚನೆ: ಪ್ರತಿಭಟನೆ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com