ಮೈಸೂರು: ನಾಡಹಬ್ಬ ಮೈಸೂರು ದಸರಾಗೆ ಅಧಿಕೃತ ಚಾಲನೆ ಸಿಕ್ಕಿದೆ. ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉದ್ಘಾಟನೆ ಮಾಡಿದರು.
ಉದ್ಘಾಟನೆ ಬಳಿಕ ಅವರು ಮಾತನಾಡಿ, ಬೂಕರ್ ಪ್ರಶಸ್ತಿ ಬಂದಾಗ ನನ್ನ ಆಪ್ತ ಗೆಳತಿಯೊಬ್ಬರು ನನ್ನನ್ನು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರುವುದಾಗಿ ಹರಕೆ ಕಟ್ಟಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ನನಗೆ ಬರಲು ಸಾಧ್ಯ ಆಗಿರಲಿಲ್ಲ. ಆದರೆ ಈಗ ಎಷ್ಟೇ ಅಡೆ ತಡೆ ಬಂದರೂ ತಾಯಿ ಚಾಮುಂಡೇಶ್ವರಿ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ ಎಂದರು.
ಮೈಸೂರು ದಸರಾದ ಪವಿತ್ರ ಕ್ಷಣದಲ್ಲಿ ಚಾಮುಂಡಿ ತಾಯಿಯ ಕೃಪೆ ನೆರಳಿನಲ್ಲಿ, ಈ ವೇದಿಕೆಯಿಂದ ನಿಮ್ಮೆದುರು ನಿಲ್ಲುವ ಅವಕಾಶ ದೊರೆತಿರುವುದು ನನ್ನ ಜೀವನದ ಅತ್ಯಂತ ಗೌರವದ ಘಳಿಕೆ. ದಸರಾ ಎಂದರೆ ಕೇವಲ ಹಬ್ಬವಲ್ಲ, ಇದು ನಾಡಿನ ನಾಡಿ, ಸಂಸ್ಕೃತಿ ಉತ್ಸವ, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳ. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಂದು ಜೀವಕ್ಕೂ ಈ ಮಣ್ಣಿನ ಬಾರಿಸುದಾರಿಕೆ, ಸ್ಪಂದನೆ ಮತ್ತು ನೆನಪುಗಳಿವೆ ಎಂದರು.