ಮಂಗಳೂರು: ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಅಡಿಯಲ್ಲಿ ನಡೆಯಲಿರುವ 4ನೇ ವರ್ಷದ ಕುಡ್ಲದ ಪಿಲಿ ಪರ್ಬ-2025 ದ ಚಪ್ಪರ ಮುಹೂರ್ತ ಕಾರ್ಯಕ್ರಮ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಿತು.
ಈ ವೇಳೆ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ದಸರಾ ಸಂದರ್ಭದಲ್ಲಿ ಇಡೀ ತುಳುನಾಡಿನಲ್ಲೇ ಹುಲಿವೇಷದ ಸಂಭ್ರಮ ಮನೆ ಮಾಡಿರುತ್ತದೆ. ಈ ನೆಲದ ಕಲೆ ತುಳುನಾಡು ಮಾತ್ರವಲ್ಲದೇ ದೇಶ- ವಿದೇಶಗಳಲ್ಲಿಯೂ ಜನಪ್ರಿಯತೆ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಈ ಜನಪ್ರಿಯತೆ ಜತೆಗೆ ಈ ಕಲೆಗೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಇದೇ ಸೆಪ್ಟೆಂಬರ್ 30 ರಂದು ನಡೆವ 4 ನೇ ವರ್ಷದ ಪಿಲಿಪರ್ಬವು ತುಳುನಾಡಿನ ಗತವೈಭವದ ಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಎಲ್ಲಾ ಹುಲಿವೇಷ ತಂಡಗಳಿಗೂ ಶುಭಹಾರೈಕೆಗಳು. ಹುಲಿವೇಷ ತಂಡಗಳನ್ನು ಪ್ರೋತ್ಸಾಹಿಸಲು ಆಗಮಿಸಲಿರುವ ಸಾರ್ವಜನಿಕರೆಲ್ಲರಿಗೂ ಪ್ರೀತಿಯ ಸ್ವಾಗತ ಬಯಸುತ್ತಾ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಸಾಧಿಸಲಿ, ಎಂದು ಶುಭ ಹಾರೈಸುತ್ತೇನೆ ಎಂದರು.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ, ನರೇಶ್ ಪ್ರಭು, ಲಲಿತ್ ಮೆಂಡನ್, ಜಗದೀಶ್ ಕದ್ರಿ, ಬಿಜೆಪಿ ನಿಕಟಪೂರ್ವ ಪಾಲಿಕೆ ಸದಸ್ಯರು, ಮುಖಂಡರು ಇದ್ದರು.