ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆವ ಮಂಗಳೂರು ದಸರಾಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಕ್ಷೇತ್ರದಲ್ಲಿ ಶಾರದಾ ಮಾತೆ, ಮಹಾಗಣಪತಿ ಮತ್ತು ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ವೈಭವದಿಂದ ನಡೆಯಿತು.
ಕೇಂದ್ರದ ಮಾಜಿ ಸಚಿವ ಹಾಗೂ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ಧನ ಪೂಜಾರಿ ಅವರ ನೇತೃತ್ವದಲ್ಲಿ ನಡೆವ ಮಂಗಳೂರು ದಸರಾಕ್ಕೆ ಮಂಗಳೂರು ರಾಮಕೃಷ್ಣ ಮಿಷನ್ ಅಧ್ಯಕ್ಷ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆಯ ಮುಖ್ಯಸ್ಥೆ ಬಹ್ಮಕುಮಾರಿ ವಿಶ್ವೇಶ್ವರಿ ಅವರು ಚಾಲನೆ ನೀಡಿದರು.
ಭವ್ಯ ಕಲಾಮಂಟಪದಲ್ಲಿಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿ ಸಹಿತ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಮಹಾಗೌರಿ, ಸಿದ್ಧಿಧಾತ್ರಿಯರ ಮೂರ್ತಿಯನ್ನು ಏಕಕಾಲದಲ್ಲಿ ಪ್ರತಿಷ್ಠಾಪಿಸಲಾಯಿತು. ಅಪಾರ ಭಕ್ತರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಬಾರಿ ತದಿಗೆ ಉಪರಿ ಬಂದಿರುವ ಹಿನ್ನೆಲೆಯಲ್ಲಿ 11 ದಿನಗಳ ಕಾಲ ದಸರಾ ಪೂಜೆ ನಡೆಯಲಿದೆ. ಭವ್ಯ ಮೂರ್ತಿಗಳಿಗೆ ಅಕ್ಟೋಬರ್ 2 ರಂದು ಸಂಜೆ ವಿಸರ್ಜನಾ ಪೂಜೆಯ ನಂತರ, ನಗರದಾದ್ಯಂತ ಮೆರವಣಿಗೆ ನಡೆಯಲಿದೆ. ಮರುದಿನ ಬೆಳಿಗ್ಗೆ ಮೂರ್ತಿಗಳನ್ನು ದೇವಸ್ಥಾನದ ಕಲ್ಯಾಣಿಯಲ್ಲಿ ನಿಮಜ್ಜನ ಮಾಡಲಾಗುತ್ತದೆ. ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ಮಾತನಾಡಿ, ಮಂಗಳೂರು ದಸರಾದ ಧಾರ್ಮಿಕ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನಡೆದಿದೆ. ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಪ್ರತಿಷ್ಠಾಪನೆಗೆ ಜನಸಾಗರ ಹರಿದು ಬಂದಿದೆ. ಹತ್ತು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ತಂಡಗಳನ್ನು ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಮಂಗಳೂರು ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾ ಪ್ರದರ್ಶನ ನೀಡಲಿದ್ದಾರೆ. 40 ತಂಡಗಳ 1,500 ಕ್ಕೂ ಅಧಿಕ ಕಲಾವಿದರಿಗೆ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೇರೆ ಬೇರೆ ಕಲಾಸಕ್ತ ಮನಸ್ಸುಗಳಿಗಾಗಿ ಭರತನಾಟ್ಯ, ಜಾನಪದ ಸಂಭ್ರಮ, ಭಕ್ತಿ ಪ್ರಧಾನ ನೃತ್ಯ ರೂಪಕ, ಯಕ್ಷಗಾನ, ಗಾನ ನಾಟ್ಯ ವೈಭವ, ತಾಳಮದ್ದಳೆ, ಹರಿಕಥೆ, ಸಂಗೀತ ಪರಿಕರಗಳ ಜುಗಲ್‌ಬಂಧಿ, ಸಪ್ತ ವೀಣಾವಾದನ, ಜಾದೂ ಪ್ರದರ್ಶನ, ನವರಸಗಳ ಸಮ್ಮಿಲನ ಈ ಬಾರಿ ವಿಶೇಷತೆ ಇರಲಿದೆ ಎಂದರು.
ಶಾಸಕ ವೇದವ್ಯಾಸ್ ಕಾಮತ್, ಸಂಸದ ಬ್ರಿಜೇಶ್ ಚೌಟ, ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಜೈರಾಜ್ ಸೋಮರಾಜ್ ಸೇರಿದಂತೆ ಹಲವರು ಇದ್ದರು.