ಉಜಿರೆ: ಮಂಗಳೂರು, ಬೆಂಗಳೂರು, ಹಾಸನ, ಉಡುಪಿ, ಉಜಿರೆ, ಧಾರವಾಡ ಹಾಗೂ ಮೈಸೂರಿನಲ್ಲಿ ಇರುವ ಕೆ.ಜಿ. ಯಿಂದ ಪಿ.ಜಿ ವರೆಗಿನ 56 ಶಿಕ್ಷಣ ಸಂಸ್ಥೆಗಳ 10 ಸಾವಿರಕ್ಕೂ ಹೆಚ್ಚು ಹಳೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಭಾನುವಾರ ಧರ್ಮಸ್ಥಳದಲ್ಲಿ ನಡೆಯಿತು.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ಎಂ. ಮೋಹನ ಆಳ್ವ ಅವರು ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆ ಅವರು ತಮ್ಮ ಸಾರ್ಥಕ ಬದುಕಿನ ಪ್ರೇರಕರು, ಮಾರ್ಗದರ್ಶಕರು ಹಾಗೂ ಗುರುಗಳಾಗಿದ್ದು ತಾನು ಅವರ ಅಭಿಮಾನಿ ಶಿಷ್ಯ ಎಂದು ಹೇಳಿದರು.
ಹೆಗ್ಗಡೆ ಅವರ ದಕ್ಷ ನಾಯಕತ್ವ, ತಾಳ್ಮೆ, ವಿವೇಕ, ಸಂಯಮ ಹಾಗೂ ಸ್ಥಿತಪ್ರಜ್ಞ ಗುಣ ನಮಗೆ ಮಾದರಿ. ಅವರು ಕಲಿಯುಗ ಕಲ್ಪವೃಕ್ಷ, ಕಾಮಧೇನು ಎಂದು ಬಣ್ಣಿಸಿದರು.
ಪಾರಂಪರಿಕ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗಾಭ್ಯಾಸಗಳಿಗೆ ಹೆಗ್ಗಡೆ ಅವರ ಸೇವೆ ಮತ್ತು ಕೊಡುಗೆ ಅಪಾರ. ಉಡುಪಿಯಲ್ಲಿ ಇರುವ ಎಸ್.ಡಿ.ಎಂ ಆಯುರ್ವೇದ ಕಾಲೇಜು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಹಾಸನ ಮತ್ತು ಬೆಂಗಳೂರಿನಲ್ಲಿರುವ ಎಸ್.ಡಿ.ಎಂ. ಆಯುರ್ವೇದ ಕಾಲೇಜುಗಳು ಮತ್ತು ಆಸ್ಪತ್ರೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿವೆ. ಉಜಿರೆ ಮತ್ತು ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಕೂಡಾ ಉತ್ತಮ ಸೇವೆಯಲ್ಲಿ ಚಿರಪರಿಚಿತ ಎಂದರು.
ಹೆಗ್ಗಡೆ ಅವರು ಹಾಗೂ ಧರ್ಮಸ್ಥಳದ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರ ಮತ್ತು ವದಂತಿಗಳನ್ನು ಖಂಡಿಸಿದ ಅವರು ಹೆಗ್ಗಡೆಯವರ ಜೊತೆ ಹಿರಿಯ ವಿದ್ಯಾರ್ಥಿಗಳೆಲ್ಲರೂ “ಧರ್ಮ ಸಿಪಾಯಿ” ಗಳಾಗಿ ಧರ್ಮಸ್ಥಳದ ಪಾವಿತ್ರತೆಯ ರಕ್ಷಣೆಗೆ ಸದಾ ಸಿದ್ಧರೂ, ಬದ್ಧರೂ ಆಗಿರುತ್ತೇವೆ ಎಂದು ಭರವಸೆ ನೀಡಿದರು.
ಪೂನಾದ ಕಾನೂನು ಕಾಲೇಜಿನ ಡೀನ್ ಹಾಗೂ ಮಂಗಳೂರಿನ ಎಸ್.ಡಿ.ಎಂ. ಕಾನೂನು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಮಾಜಿ ಉಪನ್ಯಾಸಕಿ ಪ್ರೊ. ಶಶಿಕಲಾ ಗುರುಪುರ ಅವರು ಮಾತನಾಡಿ, ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ. ಹೆಗ್ಗಡೆಯವರು ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಕಾಯಕ, ದುರ್ಬಲ ವರ್ಗದವರ ಸಬಲೀಕರಣ, ಮಹಿಳಾ ಸಬಲೀಕರಣ, ಸಮರ್ಪಣಾ ಮನೋಭಾವ, ತ್ಯಾಗ, ನಿಷ್ಠೆ, ಏಕಾಗ್ರತೆ ಮತ್ತು ಬದ್ಧತೆಯನ್ನು ಶ್ಲಾಘಿಸಿದ ಅವರು, ಹೆಗ್ಗಡೆಯವರು ಒಬ್ಬ “ದೇವಮಾನವ” ಎಂದು ಶ್ಲಾಘಿಸಿದರು.
ಧಾರವಾಡದ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಡಾ. ಅನಿಲ್ ಮಾತನಾಡಿ, ಧಾರವಾಡದಲ್ಲಿ ಹೆಗ್ಗಡೆ ಅವರ ನೇತೃತ್ವದಲ್ಲಿ ಎಸ್.ಡಿ.ಎಂ. ಸಂಸ್ಥೆಗಳ ಸೇವೆ-ಸಾಧನೆ ಶ್ಲಾಘಿಸಿ ಅಭಿನಂದಿಸಿದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಎಲ್ಲರೂ ಧರ್ಮಸ್ಥಳದ ರಾಯಭಾರಿಗಳಾಗಿದ್ದು ಹೆಗ್ಗಡೆಯವರ ಸೇವಾ ಕಾರ್ಯಗಳಿಗೆ ತೊಂದರೆಯಾಗದಂತೆ ನಿರಂತರ ಬೆಂಬಲ ನೀಡುವುದಲ್ಲದೆ ಹೆಗ್ಗಡೆಯವರ ಜೊತೆ ಸದಾ ಧರ್ಮಸ್ಥಳದ ಪಾವಿತ್ರೆಯ ರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ಭರವಸೆ ನೀಡಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ದೇವರ ಅನುಗ್ರಹದೊಂದಿಗೆ, ಎಲ್ಲರ ಪ್ರೀತಿ-ವಿಶ್ವಾಸ, ಗೌರವ ಹಾಗೂ ಅಭಿಮಾನವೇ ತಮಗೆ ಶ್ರೀರಕ್ಷೆ ಆಗಿದೆ. ತನ್ನ ಸೇವಾಕಾರ್ಯಗಳನ್ನು ಮುಂದುವರಿಸಲು ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು.
ಎಲ್ಲಾ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತದೆ. ಮಾನವೀಯ ಮೌಲ್ಯಗಳ ಉದ್ದೀಪನದೊಂದಿಗೆ ಸಮಾಜದ ಸಭ್ಯ ಸುಸಂಸ್ಕೃತ ನಾಗರಿಕರನ್ನು ರೂಪಿಸಲಾಗುತ್ತದೆ. ಎಲ್ಲ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಹೆಗ್ಗಡೆ ಅವರು ಅಭಿನಂದಿಸಿದರು.
ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಕುಮಾರ್ ಇದ್ದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ವಂದಿಸಿದರು. ಮೂಡಬಿಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಿ.ಇ.ಒ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಸಭೆಯಲ್ಲಿ ನಿರ್ಣಯ ಅಂಗೀಕಾರ
ಎಲ್ಲಾ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಸದೃಢಗೊಳಿಸಿ ಪ್ರತಿ ವರ್ಷ ಆಯಾ ಸಂಸ್ಥೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ ನಡೆಸುವುದು, ಹಿರಿಯ ವಿದ್ಯಾರ್ಥಿಗಳು ಸದಾ ಹೆಗ್ಗಡೆ ಅವರ ಬೆಂಬಲಕ್ಕೆ ಬದ್ಧರು ಹಾಗೂ ಸಿದ್ಧರು, ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿವರ್ಷ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸುವುದು, ಮೇಲಿನ ಮೂರು ಠರಾವುಗಳನ್ನು ಮಂಡಿಸಿ ಕದ್ರಿ ನವನೀತ ಶೆಟ್ಟಿ ಸಾದರ ಪಡಿಸಿ ಎಲ್ಲರ ಅಂಗೀಕಾರ ಪಡೆದರು.
ಜಾಲತಾಣಗಳಲ್ಲಿ ಹಾಗೂ ಸಮೂಹ ಮಾಧ್ಯಮಗಳಲ್ಲಿ ಧರ್ಮಸ್ಥಳದ ಬಗ್ಗೆ ಆಗುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳನ್ನು ತಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವು ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಯಿತು.