ಬಂಟ್ವಾಳ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ, ನಾಗರಿಕರಿಗೆ ಉಚಿತ ಆಂಬುಲೆನ್ಸ್ ಸೇವೆ ಒದಗಿಸಿ ‘ದಸರಾ ಕ್ರೀಡೋತ್ಸವ’ ನಡೆಸುವ ಮೂಲಕ ಜಾತ್ಯತೀತತೆ ಮತ್ತು ಶಿಸ್ತಿಗೆ ಆದ್ಯತೆ ನೀಡುತ್ತಿರುವ ಇರ್ವತ್ತೂರು ಶಾರದೋತ್ಸವ ಸೇವಾ ಸಮಿತಿ ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಹೇಳಿದರು.
ಇಲ್ಲಿನ ಇರ್ವತ್ತೂರು ಶಾರದೋತ್ಸವ ಸೇವಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ದಸರಾ ಕ್ರೀಡೋತ್ಸವ’ ಸಹಿತ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರಿಂಜ ಕ್ಷೇತ್ರದ ವ್ಯವಸ್ಥಾಪನ ಅಧ್ಯಕ್ಷ ವೀರೇಂದ್ರ ಅಮೀನ್, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಮತ್ತು ಕಜೆಕೋಡಿ ಶ್ರೀ ಉಮಾ ಮಹೇಶ್ವರ ದೇವಳದ ಅಧ್ಯಕ್ಷ ಚಂದ್ರಶೇಖರ ಭಟ್ ನೆಕ್ಕಿತೆರವು ಕ್ರೀಡಾಕೂಟ ಕ್ಕೆ ಚಾಲನೆ ನೀಡಿದರು.
ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ, ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ಕೆ. ರಮೇಶ್ ನಾಯಕ್ ರಾಯಿ, ಜಿಲ್ಲಾ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮೂಡಾಯೂರು, ಉದ್ಯಮಿ ಟಿ. ಹರೀಂದ್ರ ಪೈ ನೈನಾಡು, ಪ್ರಕಾಶ್ ಶೆಟ್ಟಿ ಹಲೆಕ್ಕಿ, ಮೋಹನ್ ಶೆಟ್ಟಿ ನರ್ವಲ್ದಡ್ಡ ಶುಭ ಹಾರೈಸಿದರು.
ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ ಆಚಾರ್ಯ, ಪಿಲಾತಬೆಟ್ಟು ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಎಂ. ಬೂಬ ಸಪಲ್ಯ ಮುಂಡಬೈಲು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರವಿ ಕೆ., ಪ್ರಮುಖರಾದ ಪ್ರೇಮಾನಾಥ ಪೀರ್ಯಗುತ್ತು, ಸುಕನ್ಯಾ ಶ್ರೀಪತಿ ಭಟ್ ಪುಂಚೋಡಿ, ಶೇಖರ್ ಪೂಜಾರಿ ಅಗಲ್ತೊಡಿ, ಸುಪ್ರೀತ್ ಜೈನ್, ಪ್ರಭಾಕರ್ ಪಿ. ಎಂ. ಮತ್ತಿತರರು ಇದ್ದರು.
ಸಮಿತಿ ಅಧ್ಯಕ್ಷ ಡಾ. ರಾಮಕೃಷ್ಣ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ದಯಾನಂದ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.