ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಭಾನುವಾರ ಮಂಗಳೂರು ದಸರಾ ಉತ್ಸವ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ನಗರದ ಸರ್ಕಿಟ್ ಹೌಸ್ ನಲ್ಲಿ ಈ ಸಂಬಂಧ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಅವರು, ದಸರಾ ಕಾರ್ಯಕ್ರಮಗಳ ಸಂದರ್ಭದಲ್ಲಿ ನಗರವನ್ನು ಅಲಂಕರಿಸುವ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದರು.
ನಗರದಾದ್ಯಂತ ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ನಗರದ ಪ್ರಮುಖ ಜಂಕ್ಷನ್ ಗಳನ್ನು ಅಲಂಕರಿಸಬೇಕು. ದಸರಾ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಹಾಗೂ ಕಾರ್ಯಕ್ರಮ ನಡೆವ ಸ್ಥಳಗಳಲ್ಲಿ ನಿರಂತರ ಸ್ವಚ್ಛತೆ ಕಾಪಾಡಲು ತಂಡ ನಿಯೋಜಿಸಬೇಕು. ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳು ಸದಾ ಲಭ್ಯ ಆಗುವಂತೆ ನಿಗಾವಹಿಸಬೇಕು. ಪೊಲೀಸ್ ಭದ್ರತೆಯನ್ನು ಎಲ್ಲ ಕಡೆ ಕಲ್ಪಿಸಲು ತಿಳಿಸಿದರು.
ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. , ಮಹಾನಗರ ಪಾಲಿಕೆ ಕಮಿಷನರ್ ರವಿಚಂದ್ರ ನಾಯಕ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಇದ್ದರು.