Breaking News

ದ.ಕ ಜಿಲ್ಲೆಯಲ್ಲಿ ಇ–ರಿಕ್ಷಾಗಳಿಗೆ ಪರವಾನಗಿ, ಅನಿರ್ಧಿಷ್ಟಾವಧಿ ಧರಣಿಗೆ ಮುಂದಾದ ರಿಕ್ಷಾ ಚಾಲಕರ ಸಂಘ

 

ಮಂಗಳೂರು: ಬ್ಯಾಟರಿ ಚಾಲಿತ ಇ–ರಿಕ್ಷಾಗಳಿಗೆ ದ.ಕ ಜಿಲ್ಲೆಯಲ್ಲಿ ಸಂಚಾರ ಅವಕಾಶ ನೀಡುವ ಮೂಲಕ ಅನಗತ್ಯ ಗೊಂದಲ ಉಂಟಾಗಿದೆ ಎಂದು ಆರೋಪಿಸಿ ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘ ಮತ್ತು ಸಮಾನ ಮನಸ್ಕರ ವೇದಿಕೆ ವತಿಯಿಂದ ಅನಿರ್ಧಿಷ್ಟಾವಧಿಯ ಧರಣಿ ಸೋಮವಾರ ಪ್ರಾರಂಭವಾಗಿದೆ.

ಮಂಗಳೂರು ಆರ್‌ಟಿಒ ಕಚೇರಿ ಎದುರು ಆರಂಭಗೊಂಡಿರುವ ಧರಣಿ ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅವರು, ಕಾನೂನು ವಿರುದ್ಧವಾಗಿ ಪರವಾನಗಿ ರಹಿತವಾಗಿ ಬ್ಯಾಟರಿ ರಿಕ್ಷಾಗಳಿಗೆ ಅವಕಾಶ ನೀಡಿದ ಕೇಂದ್ರ ಸರಕಾರದ ಒಡೆದು ಆಳುವ ನೀತಿ ಅನುಸರಿಸಿದೆ. ರಾಜ್ಯ ಸರಕಾರ ತಮಿಳುನಾಡಿನಂತೆ ರಾಜ್ಯದಲ್ಲಿಯೂ ನಿಯಮ ತಿದ್ದುಪಡಿ ಮಾಡಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಬೇಕು. ಜಿಲ್ಲೆಯಲ್ಲಿ ಬ್ಯಾಟರಿ ರಿಕ್ಷಾಗಳ ಸಂಚಾರಕ್ಕೆ ಜಿಲ್ಲಾಡಳಿತ ನೀಡಿರುವ ಅನುಮತಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಧರಣಿ ಉದ್ಘಾಟಿಸಿ ಮಾತನಾಡಿದ ಸಮನ್ವಯ ಸಮಿತಿ ಸ್ಥಾಪಕ ಅಧ್ಯಕ್ಷ ಅಲಿ ಹಸನ್ ಅವರು, ರಿಕ್ಷಾ ಚಾಲಕರ ಮೇಲಿನ ನಿರಂತರ ದಬ್ಬಾಳಿಕೆ ಕೊನೆ ಆಗಬೇಕು. ರಿಕ್ಷಾ ಚಾಲಕರನ್ನು ಒಡೆದು ಆಳುವ 2018 ರ ನೀತಿ ರದ್ದುಗೊಳ್ಳಬೇಕು ಎಂದು ಆಗ್ರಹಿಸಿದರು.

ದ. ಕ. ಜಿಲ್ಲೆಯಾದ್ಯಂತ ಎಲೆಕ್ಟ್ರಿಕ್ ಅಟೋ ರಿಕ್ಷಾಗಳಿಗೆ ಸಂಚಾರಕ್ಕೆ ಅನುಮತಿ ನೀಡಿರುವ ಆದೇಶ ಹಿಂಪಡೆಯಬೇಕು. ನಗರದಲ್ಲಿ 390 ಕ್ಕೂ ಅಧಿಕ ರಿಕ್ಷಾ ಪಾರ್ಕ್‌ಗಳಿದ್ದವು. ಪ್ರಸ್ತುತ 115 ರಷ್ಟು ಮಾತ್ರ ಇವೆ. 8000 ಕ್ಕೂ ಅಧಿಕ ಸಾಮಾನ್ಯ ಆಟೋ ರಿಕ್ಷಾಗಳಿದ್ದು, 2000 ಎಲೆಕ್ಟ್ರಿಕ್ ರಿಕ್ಷಾಗಳು ಬಂದಿವೆ. ಇದೀಗ ಇ– ಆಟೋಗಳಿಗೆ ಜಿಲ್ಲೆಯಾದ್ಯಂತ ಸಂಚಾರ ಹಾಗೂ ಪಾರ್ಕಿಂಗ್‌ಗೆ ಅವಕಾಶ ನೀಡುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುವ ಪ್ರಯತ್ನ ನಡೆದಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಜೆರಾಲ್ಡ್ ಟವರ್ಸ್ ಅವರು ಮಾತನಾಡಿ, ಇ– ಆಟೋಗಳಿಗೆ ಸಂಬಂಧಿಸಿ ಕೇಂದ್ರ ಸರಕಾರ ತನ್ನ ನಿಲುವನ್ನು ಪುನರ್ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಮಂಗಳಾದೇವಿ, ದ.ಕ. ಜಿಲ್ಲಾ ಆಟೋ ಚಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ, ಪ್ರಮುಖರಾದ ಅರುಣ್ ಕುಮಾರ್, ದಯಾನಂದ್ ಶೆಟ್ಟಿ, ಹಿರಿಯ ರಿಕ್ಷಾ ಚಾಲಕ ಉಣ್ಣಿಕೃಷ್ಣನ್ ಇದ್ದರು.

  1.  

Leave a Reply

Your email address will not be published. Required fields are marked *