Breaking News

ಬಂಟ್ವಾಳದಿಂದಲೇ ವಿಧಾನ ಪರಿಷತ್ ಉಪ ಚುನಾವಣೆಗೆ ಬಿಜೆಪಿ ರಣವೀಳ್ಯ, ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗು

 

ಮಂಗಳೂರು: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಈ ಬಾರಿ ಕೂಡ ಬಿಜೆಪಿ ಗೆಲುವು ಖಚಿತ. ನಮ್ಮ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಗೆಲುವು ಖಂಡಿತ ಎಂದು   ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಬಿ.ವೈ. ವಿಜಯೇಂದ್ರ ಹೇಳಿದರು.

ಇಲ್ಲಿನ ಬಂಟ್ವಾಳ ಬಂಟರ ಭವನದಲ್ಲಿ ಬಿಜೆಪಿ ವತಿಯಿಂದ ವಿಧಾನ ಪರಿಷತ್ ಉಪ ಚುನಾವಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತ್ ಸದಸ್ಯರ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ವಾಲ್ಮೀಕಿ ನಿಗಮದಲ್ಲಿ 87 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಸದನದಲ್ಲಿ ಒಪ್ಪಿಕೊಂಡ ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯ. ಮುಡಾ ಹಗರಣದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ ಬಳಿಕ ಪರಿಹಾರ ಕೂಡ ಪಡೆಯದೇ 14 ಸೈಟ್ ಗಳನ್ನು ವಾಪಸ್ ಕೊಡುವುದಾಗಿ ಘೋಷಣೆ ಮಾಡಿದ ಪ್ರಾಮಾಣಿಕ ಮುಖ್ಯಮಂತ್ರಿ. ರಾಜ್ಯದಲ್ಲಿ ವಾಲ್ಮೀಕಿ ನಿಗಮದ  ಹಗರಣ ನಡೆದಿರುವಾಗ, ಸಿದ್ದರಾಮಯ್ಯ ತಮ್ಮ ಮೇಲೆ ಮುಡಾ ಹಗರಣದ ಆರೋಪ ಬಂದಾಗ ರಾನೀನಾಮೆ ನೀಡದೇ  ಅಧಿಕಾರದಲ್ಲಿ ಮುಂದುವರೆದಿರುವುದು ನಾಚಿಗೇಡಿನ ಸಂಗತಿ ಎಂದರು.

ದಕ್ಷಿಣ ಕನ್ನಡದ ಬಗ್ಗೆ ನನಗೆ ಅಪಾರ ಪ್ರೀತಿ ಹಾಗೂ ಅವಿನಾಭಾವ ನಂಟು ಇದೆ. ಇಲ್ಲಿಂದಲೇ ನಮಗೆ ಪ್ರೇರಣೆ ಸಿಗುತ್ತದೆ. ಸಂಘಟನೆಗೆ ದ.ಕ ಜಿಲ್ಲೆ ಮಾದರಿ ಆಗಿದ್ದು, ಇದೇ 21 ರಂದು ನಡೆಯುವ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಆಗಿರುವ ಕಿಶೋರ್ ಕುಮಾರ್ ಪುತ್ತೂರು ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, ರಾಜ್ಯದಲ್ಲಿ ಅತ್ಯಂತ ಭ್ರಷ್ಟಾಚಾರ ನಡೆಸುತ್ತಿರುವ ಸರಕಾರ ಕಾಂಗ್ರೆಸ್ ಸರಕಾರ, ಒಂದು ವರ್ಗವನ್ನು ಓಲೈಕೆ ಮಾಡುವಲ್ಲಿ ಕಾಲಹರಣ ಮಾಡುತ್ತಿದೆ. ಯಾವುದೇ ಅಭಿವೃದ್ಧಿ ಆಗುತ್ತಿಲ್ಲ ಎಂದರು.

ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಅಂತರದಲ್ಲಿ ಗೆದ್ದರೆ ರಾಜ್ಯದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ. ರಾಜ್ಯದಲ್ಲಿ ಸಾವಿರ ಸೈಟ್ ಗಳ ಹಗರಣ ನಡೆದಿದೆ ಎಂದರು.

ಮಾಜಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ,ರಾಜ್ಯ ಸಹ ಪ್ರಭಾರಿ ಸುಧಾಕರ ರೆಡ್ಡಿ ,ಸಂಸದರಾದ ಬೃಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನಿಲ್ ಕುಮಾರ್, ರಾಜೇಶ್ ನಾಯ್ಕ್ , ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಪ್ರಭಾರಿ ಉದಯ ಕುಮಾರ್ , ಜೆಡಿಎಸ್ ದ.ಕ ಜಿಲ್ಲಾ ಘಟಕದ ಅಧ್ಯಕ್ಷ ಜಾ.ಕೆ. ಮಾಧವ ಗೌಡ, ವಿಧಾನ ಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾ ಚುನಾವಣಾ ಪ್ರಭಾರಿ ಗಣೇಶ್ ಕಾರ್ಣಿಕ್, ಜಿಲ್ಲಾ ವಕ್ತಾರ ಪ್ರೇಮಾನಂದ ಶೆಟ್ಟಿ ಇದ್ದರು.

  1.  

Leave a Reply

Your email address will not be published. Required fields are marked *