Breaking News

ಉಪ ಚುನಾವಣೆಗೆ ಅಚ್ಚರಿ ಹೆಸರು ಘೋಷಿಸಿದ ಬಿಜೆಪಿ, ಕಿಶೋರ್ ಕುಮಾರ್ ಗೆ ಜಾಕ್ ಪಾಟ್, ನಳಿನ್ ಕೈ ತಪ್ಪಿದ ಟಿಕೆಟ್

 

ಮಂಗಳೂರು: ದಕ್ಷಿಣ ಕನ್ನಡ – ಉಡುಪಿ ಸ್ಥಳೀಯಾಡಳಿತ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಗಾಗಿ ನಡೆಯುವ ಉಪ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಚ್ಚರಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಕಿಶೋರ್ ಕುಮಾರ್ ಬೊಟ್ಯಾಡಿ ಅವರಿಗೆ ಟಿಕೆಟ್ ನೀಡಿ ಹೈಕಮಾಂಡ್  ಘೋಷಣೆ ಮಾಡಿದೆ.

ನಾಮಪತ್ರ ಸಲ್ಲಿಸಲು ಇನ್ನು ಎರಡು ದಿನ ಬಾಕಿ ಇರುವಾಗ ಕಿಶೋರ್ ಕುಮಾರ್ ಹೆಸರು ಘೋಷಣೆ ಮಾಡಿದ್ದು, ಬಿಜೆಪಿ ಆಂತರಿಕ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಂದ ತೆರವಾದ ಸ್ಥಾನಕ್ಕೆ ಇದೇ 21 ರಂದು ಉಪ ಚುನಾವಣೆ ನಡೆಯುತ್ತಿದ್ದು, ಮಾಜಿ ಸಂಸದ ನಳಿನ್ ಕುಮಾರ್ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೆಸರು ಮುಂಚೂಣಿ ಪಟ್ಟಿಯಲ್ಲಿ ಇತ್ತು. ಸೋಮವಾರ ಬಹುತೇಕ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೆಸರು ಅಂತಿಮಗೊಂಡಿರುವ ಸುದ್ದಿ ವ್ಯಾಪಕವಾಗಿ ಹರಡಿತ್ತು. ನಳಿನ್ ಕುಮಾರ್ ಕಟೀಲ್ ಬೆಂಬಲಿಗರ ಪಡೆ ನಾಮಪತ್ರ ಸಲ್ಲಿಸುವುದಕ್ಕೆ ತಯಾರಿ ಮಾಡಿಕೊಂಡಿತ್ತು, ಆದರೆ ಹೈಕಮಾಂಡ್ ಇದೀಗ ಅಚ್ಚರಿ ಅಭ್ಯರ್ಥಿ ಘೋಷಣೆ ಮಾಡಿರುವುದು ಸಂಚಲನಕ್ಕೆ ಕಾರಣವಾಗಿದೆ.

  1.  

ಆದರೆ, ಬಿಜೆಪಿ ಹೈಕಮಾಂಡ್ ಮಂಗಳವಾರ ಕಿಶೋರ್ ಕುಮಾರ್ ಅವರ ಹೆಸರು ಘೋಷಣೆ ಮಾಡಿದೆ. ಬಿಜೆಪಿಯಲ್ಲಿ ಸುದೀರ್ಘ ಅವಧಿಯಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದ ಕಿಶೋರ್ ಕುಮಾರ್ ಪುತ್ತೂರು ಅವರಿಗೆ ದಸರಾ ಜಾಕ್ ಪಾಟ್ ಹೊಡೆದಿದೆ. ಕಳೆದ ಬಾರಿ ಪುತ್ತೂರಿನಲ್ಲಿ ಕಿಶೋರ್ ಕುಮಾರ್ ವಿಧಾನಸಭೆ ಅಭ್ಯರ್ಥಿ ಆಗುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿತ್ತು. ಟಿಕೆಟ್ ಸಿಕ್ಕಿಲ್ಲವೆಂದು ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧಿಸಿದಾಗ, ಕಿಶೋರ್ ಕುಮಾರ್ ಬಿಜೆಪಿ ಪರವಾಗಿ ನಿಂತಿದ್ದರು. ಆದರೆ ನಳಿನ್ ಕುಮಾರ್ ವಿರೋಧಿ ಅಲೆ ಮತ್ತು ಬಿಜೆಪಿ ನಾಯಕರ ಕುರಿತ ವಿರೋಧ ಅಭಿಪ್ರಾಯದಿಂದಾಗಿ ಬಿಜೆಪಿ 3ನೇ ಸ್ಥಾನಕ್ಕೆ ಕುಸಿತು.

ಈ ಬಾರಿ ಕೋಟ ಅವರಿಂದ ತೆರವಾದ ಸ್ಥಾನಕ್ಕೆ ಅರುಣ್ ಪುತ್ತಿಲ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಅವರಿಗೂ ಕೂಡ ಟಿಕೆಟ್ ಮಿಸ್ ಆಗಿದೆ. ನವದೆಹಲಿಯಲ್ಲಿ ಬೀಡು ಬಿಟ್ಟು ಟಿಕೆಟಿಗಾಗಿ ಕಸರತ್ತು ನಡೆಸಿದ್ದ ನಳಿನ್ ಕುಮಾರ್ ಈ ಬಾರಿ ಕೂಡ ಟಿಕೆಟ್ ಕೈತಪ್ಪಿದೆ. ಬಿಲ್ಲವ ಕೋಟಾ ಅಡಿಯಲ್ಲಿ ಸತೀಶ್ ಕುಂಪಲ ಹೆಸರೂ ಕೇಳಿ ಬಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ಕಿಶೋರ್ ಕುಮಾರ್ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ.

  1.  

Leave a Reply

Your email address will not be published. Required fields are marked *