Breaking News

ಸಿಎಂ ಸಿದ್ದರಾಮಯ್ಯ ಕನ್ನಡ ವಿರೋಧಿ, ಕೂಡಲೇ ರಾಜೀನಾಮೆ ನೀಡಬೇಕು: ರಾಜಗೋಪಾಲ್ ರೈ

 

ಮಂಗಳೂರು: ಸಿಬಿಐ ಸ್ವಯಂ ಪ್ರೇರಿತ ತನಿಖೆ ನಡೆಸಬಹುದೆಂಬ ಅಧಿಕಾರವನ್ನು ರದ್ದು ಮಾಡುವ ಸಂಪುಟದ ನಿರ್ಣಯದ ಮೂಲಕ ಕಾಂಗ್ರೆಸ್ ಸರಕಾರ ಸಂವಿಧಾನ ವಿರೋಧಿ ನಡೆ  ಅನುಸರಿಸುತ್ತಿದೆ.  ಮುಡಾ, ವಾಲ್ಮೀಕಿ ನಿಗಮದ ಹಗರಣಗಳಿಂದ ಸಿದ್ದರಾಮಯ್ಯ ಅವರ ಸರಕಾರ ರಾಜ್ಯವನ್ನು ಲೂಟಿ ಮಾಡುತ್ತಿದ್ದು, ಕೂಡಲೇ ರಾಜೀನಾಮೆ ನೀಡಬೇಕು. ದೇಶದ ಒಕ್ಕೂಟ ವ್ಯವಸ್ಥೆಗೆ ದಕ್ಕೆ ತರುವ ಹುನ್ನಾರ ನಡೆಯುತ್ತಿದೆ ಎಂದು ಜಿಲ್ಲಾ ಬಿಜೆಪಿ ಘಟಕದ ವಕ್ತಾರ ರಾಜಗೋಪಾಲ್ ರೈ ಅವರು ಶುಕ್ರವಾರ  ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯ ಅವರ ನಕಲಿ ಕನ್ನಡ ಪ್ರೇಮದ ಮುಖವಾಡ ಕಳಚಿದೆ. ಕರ್ನಾಟಕದ ಪ್ರಥಮ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರು ವಿಧಾನ ಸಭೆಯಲ್ಲೇ ಶಾಸಕರಿಗೆ ಸ್ವರ, ವ್ಯಂಜನ, ಸಂದಿಗಳ ಪಾಠ ಮಾಡುವಾಗ, ಕನ್ನಡಿಗರು ಸಿದ್ದರಾಮಯ್ಯ ಒಬ್ಬ ನಂಬರ್ ಒನ್ ಕನ್ನಡಿಗ ಆಗಿದ್ದರು. ಆದರೆ, ರಾಜ್ಯದಲ್ಲಿ ಉರ್ದು ಹೇರಿಕೆ ಮಾಡುವ ಮೂಲಕ, ನೀವು ನಂಬರ್ ಒನ್ ಕನ್ನಡಿಗ ಅಲ್ಲ ನವೆಂಬರ್ ಒನ್ ಕನ್ನಡಿಗ ಎಂದು ಸಾಬೀತು ಮಾಡಿಬಿಟ್ಟಿರಿ, ಜನ ನಿಮ್ಮನ್ನು ಪಕ್ಷಪಾತಿ ಹಾಗೂ ಹಿಂದೂ ವಿರೋಧಿ ಎಂದು ಕರೆದರೂ ತಪ್ಪಿಲ್ಲ. ಭಯ ಭೀತರಾಗಿ ಬದುಕಬೇಕಾದ ಪರಿಸ್ಥಿತಿಯನ್ನು ತಂದಿಟ್ಟಂತಹ ಸಿದ್ದರಾಮಯ್ಯ ಅವರಂತಹ ಮುಖ್ಯಮಂತ್ರಿ ಬೇಕಿಲ್ಲ. ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಎಂದು ಆಗ್ರಹಿಸಿದರು.

ರಾಜ್ಯಪಾಲರು ರಾಜ್ಯ ಸರಕಾರಕ್ಕೆ ಬರೆದ ಪತ್ರಕ್ಕೆ ಮುಖ್ಯ ಕಾರ್ಯದರ್ಶಿ ಉತ್ತರ ಕೊಡಬಾರದು,  ಸಂಪುಟದಲ್ಲಿ ಒಪ್ಪಿಗೆ ಕೊಟ್ಟ ವಿಚಾರವನ್ನು ಅಷ್ಟೇ ಕಳುಹಿಸಬೇಕು ಎಂಬ ನಿರ್ಣಯ ಅಂಗೀಕಾರದ ಹಿಂದೇ ವ್ಯವಸ್ಥೆ ಹಾಳು ಮಾಡುವ ಸಂಚು ಇದೆ. ಇಂತಹ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಸರಕಾರವು ವ್ಯವಸ್ಥೆ ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದೆ ಎಂದರು.

  1.  

ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ ರಾಜೀನಾಮೆಗೆ ಒತ್ತಾಯ ಮಾಡುತ್ತಿದ್ದ ಸಿದ್ದರಾಮಯ್ಯ ಅವರು ತಮ್ಮ ವರಸೆ ಬದಲಾಯಿಸಿದ್ದಾರೆ.  ಈಗ ಸಿದ್ದರಾಮಯ್ಯ ಅವರು ನಿಷ್ಪಕ್ಷಪಾತ ತನಿಖೆ ನಡೆಸಲು ಸಹಕಾರ ನೀಡದೇ ಇರುವುದು ಅನುಮಾನಕ್ಕೆ ಕಾರಣ ಆಗಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸಿಬಿ ದುರುಪಯೋಗ ನಡೆದಿತ್ತು. ಲೋಕಾಯುಕ್ತ ದುರ್ಬಲಗೊಳಿಸಿದ್ದರು ಎಂದರು.

ಮುಡಾ ಹಗರಣದ ಕುರಿತು ಬಿಜೆಪಿ ನಿಲುವು ಸ್ಪಷ್ಟವಿದೆ. ಈ ಹಗರಣ ಕೇವಲ 14 ನಿವೇಶನಗಳಿಗೆ ಸೀಮಿತವಲ್ಲ. ಒಂದೆಡೆ 14 ನಿವೇಶನಗಳಿದ್ದರೆ, ಇನ್ನೊಂದೆಡೆ 4 ರಿಂದ 5 ಸಾವಿರ ಕೋಟಿ ಬೆಲೆ ಬಾಳುವ ನಿವೇಶನಗಳು ರಿಯಲ್ ಎಸ್ಟೇಟ್, ದಲ್ಲಾಳಿಗಳ ಪಾಲಾಗಿವೆ. ಇದೆಲ್ಲವುಗಳ ಸಮಗ್ರ ತನಿಖೆ ಆಗಬೇಕಾದರೆ ಸಿಬಿಐನಿಂದ ತನಿಖೆ ಆಗಬೇಕು ಎಂದರು.

ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಶೇಟ್,  ಮೋಹನ್ ರಾಜ್ ಕೆ.ಆರ್, ಹಾಗೂ ಡೊಂಬಯ್ಯ ಆರ್, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಇದ್ದರು.

  1.  

Leave a Reply

Your email address will not be published. Required fields are marked *