Breaking News

ಉಳಾಯಿಬೆಟ್ಟು ದರೋಡೆ ಪ್ರಕರಣ, 10 ಮಂದಿ ಬಂಧನ, ವಿಶೇಷ ಬಹುಮಾನ: ಕಮಿಷನರ್‌ ಅಗ್ರವಾಲ್‌

 

ಮಂಗಳೂರು: ಉಳಾಯಿಬೆಟ್ಟು ಸಮೀಪದ ಪೆರ್ಮಂಕಿಯ ಉದ್ಯಮಿ, ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್‌ ಅವರ ಮನೆಯಲ್ಲಿ ಜೂನ್‌ 21 ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುತ್ತದೆ ಎಂದು ಪೊಲೀಸ್ ಕಮಿಷನರ್‌ ಅನುಪಮ್ ಅಗ್ರವಾಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೀರುಮಾರ್ಗ ನಿವಾಸಿಗಳಾದ ವಸಂತ ಕುಮಾರ್ (42), ರಮೇಶ ಪೂಜಾರಿ (42), ಬಂಟ್ವಾಳ ಪೆರುವಾಯಿಯ ರೇಮಂಡ್ ಡಿಸೋಜ (47), ಉಪ್ಪಳ ಪೈವಳಿಕೆಯ ಬಾಲಕೃಷ್ಣ ಶೆಟ್ಟಿ (48), ಕೇರಳದ ತ್ರಿಶೂರು ಜಿಲ್ಲೆಯ ಶಾಕೀರ್ ಹುಸೈನ್ ಯಾನೆ ಜಾಕೀರ್ (56), ವಿನೋಜ್ (38), ಸಜೀಶ್ (32), ಸತೀಶ್ ಬಾಬು (44), ಶಿಜೋ ದೇವಸ್ಸಿ (38), ತಿರುವನಂತಪುರ ಜಿಲ್ಲೆಯ ಬಿಜು (41) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ಇದ್ದು, ಅವರನ್ನು ಕೂಡ ಶೀಘ್ರವೇ ಬಂಧನ ಮಾಡಲಾಗುತ್ತದೆ ಎಂದು ತಿಳಿಸಿದರು.

  1.  

ಜೂನ್‌ 21 ರಂದು ರಾತ್ರಿ ವೇಳೆ 10 ಕ್ಕೂ ಅಧಿಕ ದರೋಡೆಕೋರರು ಮನೆಗೆ ನುಗ್ಗಿ ಪದ್ಮನಾಭ ಕೋಟ್ಯಾನ್ ಹಾಗೂ ಅವರ ಪತ್ನಿ ಮತ್ತು ಮಗನನ್ನು ಕಟ್ಟಿ ಹಾಕಿ, ಹಲ್ಲೆ ನಡೆಸಿ, ಚೂರಿ ತೋರಿಸಿ ಜೀವ ಬೆದರಿಕೆ ಹಾಕಿ ಚಿನ್ನಾಭರಣ ಹಾಗೂ ನಗದು ಸಹಿತ 9 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಪದ್ಮನಾಭ ಕೋಟ್ಯಾನ್‌ ಅವರ ಲಾರಿಯಲ್ಲಿ ಚಾಲಕನಾಗಿದ್ದ ಮತ್ತು ನೀರುಮಾರ್ಗ ಗ್ರಾಮ ಪಂಚಾಯಿತಿ ಸದಸ್ಯನೇ ಈ ಕೃತ್ಯದ ಸೂತ್ರಧಾರಿ ಎಂಬುದು ತಿಳಿದು ಬಂದಿದೆ ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ 2 ಕಾರು ವಶಕ್ಕೆ ಪಡೆಯಲಾಗಿದೆ. 10 ಮಂದಿಯ ಪೈಕಿ ನಾಲ್ಕು ಮಂದಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಜಾನ್ ಬಾಸ್ಕೋ ಎಂಬಾತ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದು, ಈತನ ಮೇಲೆ ತ್ರಿಶೂರಿನಲ್ಲಿ ಹಲವು ಪ್ರಕರಣ ದಾಖಲಾಗಿವೆ. ಸತೀಶ್ ಬಾಬು ಎಂಬಾತನ ಮೇಲೆ ಕೊಲೆ, ಕೊಲೆಯತ್ನ ಪ್ರಕರಣ ದಾಖಲಾಗಿವೆ. ವಸಂತ್ ಕುಮಾರ್ ಮೇಲೆ ಮಂಗಳೂರು ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಪ್ರಕರಣವನ್ನು ಸವಾಲಾಗಿ ತೆಗೆದುಕೊಳ್ಳಲಾಗಿತ್ತು. ಕಂಕನಾಡಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಮತ್ತು ಮಂಗಳೂರು ನಗರ ದಕ್ಷಿಣ ಉಪವಿಭಾಗದ ಎಸಿಪಿ ನೇತೃತ್ವದ ಹಾಗೂ ಸಿಸಿಬಿ ತಂಡಗಳನ್ನು ಪ್ರತ್ಯೇಕವಾಗಿ ರಚಿಸಲಾಗಿತ್ತು. 40 ಮಂದಿ ಈ ತಂಡವು ವಿಶೇಷ ಕಾರ್ಯಾಚರಣೆ ನಡೆಸಿ ವಿವಿಧ ಆಯಾಮಗಳು ಮತ್ತು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿತ್ತು. ದರೋಡೆ ನಡೆಸಿದ ಬಳಿಕ ಆರೋಪಿಗಳು ಕಾರಿನಲ್ಲಿ ಬಂಟ್ವಾಳ ಕಡೆಗೆ ತೆರಳಿದ್ದರು. ಬಳಿಕ ತಲಪಾಡಿ ಮೂಲಕ ಕೇರಳಕ್ಕೆ ಎರಡು ಕಾರಿನಲ್ಲಿ ಪರಾರಿ ಆಗಿದ್ದರು. ಇದೀಗ 10 ಮಂದಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಡಿಸಿಪಿಗಳಾದ ಸಿದ್ದಾರ್ಥ ಗೋಯಲ್‌, ದಿನೇಶ್‌ ಕುಮಾರ್‌, ಎಸಿಪಿ ಧನ್ಯಾ ನಾಯಕ್‌ ಇದ್ದರು.

  1.  

Leave a Reply

Your email address will not be published. Required fields are marked *