Breaking News

ಡಿಸಿ ಮುಲ್ಲೈ ಮುಹಿಲನ್‌ ಮಾದರಿ ನಡೆ, ವಿದ್ಯಾರ್ಥಿಗಳು, ಪೋಷಕರು ಖುಷ್

 

ಮಂಗಳೂರು: ಜಿಲ್ಲಾಧಿಕಾರಿ ನಿವಾಸದ ಎದುರು ಹಾದು ಹೋಗುವಾಗ ಕಾಂಪೌಂಡ್‌ ಗೋಡೆ ಹೊರಗಿನ ನಾಮಫಲಕ ನೋಡಿ, ಮುಂದೇ ಒಂದು ದಿನ ಇದೇ ರೀತಿಯ ನನ್ನ ಹೆಸರು ಕೂಡ ಹಾಕಿಸಿಕೊಳ್ಳಬೇಕು ಎಂಬ ಹಂಬಲವೇ ಜಿಲ್ಲಾಧಿಕಾರಿ ಆಗಲು ಕಾರಣ ಆಯಿತು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹೇಳಿದರು.

2023-24ರ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ವಿದ್ಯಾರ್ಥಿಗೂ ಈ ವಿಚಾರ ವಿನಿಮಯದ ಕಾರ್ಯಕ್ರಮವು ಸ್ಮರಣೀಯ ಹಾಗೂ ಉತ್ತೇಜನಕಾರಿ ಆಗಿರಲಿ ಎಂಬ ಕಾರಣಕ್ಕಾಗಿ, ವಿಶೇಷವಾಗಿ ಜಿಲ್ಲಾಧಿಕಾರಿ ನಿವಾಸದಲ್ಲೇ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದೇನೆ. ಮುಂದೆಯೂ ವಿದ್ಯಾರ್ಥಿಗಳನ್ನು ಉತ್ತೇಜಿಸುವಲ್ಲಿ ಈ ಕಾರ್ಯಕ್ರಮ ಮಾದರಿ ಆಗಿರಲಿ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಅವರು ಮಾತನಾಡಿ, ಮಕ್ಕಳು ಒತ್ತಡ ನಿರ್ವಹಣೆಯ ಕೌಶಲ , ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳುವುದರಿಂದ ಉನ್ನತ ಸ್ಥಾನಕ್ಕೆ ಏರುವುದು ಸುಲಭ ಸಾಧ್ಯ ಎಂದು ಹೇಳಿದರು.

  1.  

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರು ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಗುರಿಯನ್ನು ಹೊಂದಿರಬೇಕು. ವಿದ್ಯಾರ್ಥಿಗಳು ಎಷ್ಟೇ ಸಾಧನೆ ಮಾಡಿದರು ತಮ್ಮ ಹೆತ್ತವರನ್ನು ಹಾಗೂ ಪೋಷಕರನ್ನು ಎಂದಿಗೂ ಮರೆಯಬಾರದು. ಅವರನ್ನು ಸದಾ ಗೌರವದಿಂದ ಕಾಣಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ, ಕಠಿಣ ಪರಿಶ್ರಮ ಅನಿವಾರ್ಯ. ಯಶಸ್ಸು ಎನ್ನುವುದು ನಿಂತ ನೀರಲ್ಲ ಸದಾ ಹರಿಯುತ್ತಿರುವ ನದಿಯಂತೆ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. 6 ನೇ ಸ್ಥಾನ ಪಡೆದ ಮಂಗಳೂರಿನ ಶ್ರೀ ರಾಮಕೃಷ್ಣ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ವಿದ್ಯಾರ್ಥಿ ತೃಷಾ ಎಸ್ ಹಾಗೂ ವಾಲ್ಮೀಕಿ ಆಶ್ರಮ ಶಾಲೆ ಮಧ್ಯ ಇಲ್ಲಿನ ವಿದ್ಯಾರ್ಥಿಯಾದ ಸೋಮನಾಥ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿರುವಂತಹ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾಧಿಕಾರಿಗೆ ಧನ್ಯವಾದ ಸಮರ್ಪಿಸಿದರು.

ಪಿ.ಯು.ಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಎಕ್ಸೆಲೆಂಟ್ ಪಿ.ಯು. ಕಾಲೇಜಿನ ವಿದ್ಯಾರ್ಥಿ ಗುಣಸಾಗರ್ ಡಿ. ರಾಜ್ಯಕ್ಕೆ 5ನೇ ಸ್ಥಾನ ಪಡೆದ ಎಕ್ಸಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಶಾಶ್ವತಿ, ರಾಜ್ಯಕ್ಕೆ 10ನೇ ಸ್ಥಾನ ಪಡೆದ ಬಲ್ಮಠ ಸರಕಾರಿ ಹೆಣ್ಣುಮಕ್ಕಳ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಅಭಿಲಾಷ ಧೋಟ, ಮಾತನಾಡಿ ಅಧಿಕಾರಿಗಳು ತಮ್ಮ ಒತ್ತಡದ ಕೆಲಸ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು ವಿದ್ಯಾರ್ಥಿಗಳಿಗಾಗಿ ಸಮಯವನ್ನು ಮುಡಿಪಾಗಿಟ್ಟು ಅವರು ಯಶಸ್ಸನ್ನು ಗಳಿಸುವುದಕ್ಕಾಗಿ ಉತ್ತಮ ಸಲಹೆ ಸೂಚನೆಗಳನ್ನು ನೀಡಿರುವುದಕ್ಕಾಗಿ ವಂದಿಸಿದರು.

ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ಜಿಲ್ಲಾಧಿಕಾರಿನಿವಾಸವನ್ನು ವೀಕ್ಷಿಸಿ. ಅಧಿಕಾರಿಗಳೊಂದಿಗೆ ಪೋಟೋ ಕ್ಲಿಕ್ಕಿಸಿ ಖುಷಿ ಪಟ್ಟರು.
ಎಸ್ಸೆಸ್ಸೆಲ್ಸಿ ಆಯ್ದ 30 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 43 ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ನೀಡಿದರು. ಸಾಧನೆಯ ಹಾದಿ ಬಗ್ಗೆ ವಿವರಿಸಿದರು.
ಡಿಡಿಪಿಯು ಸಿ.ಡಿ. ಜಯಣ್ಣ, ಡಿಡಿಪಿಐ ವೆಂಕಟೇಶ್ ಸುಬ್ರಾಯ ಪಟಗಾರ್, ಹಾಗೂ ವಿದ್ಯಾರ್ಥಿಗಳ ಹೆತ್ತವರು, ರಕ್ಷಕರು, ಉಪನ್ಯಾಸಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.
ಮಂಗಳೂರು-ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್.ಆರ್ ವಂದಿಸಿದರು. ನಿಸರ್ಗ ಫೌಂಡೇಶನ್ ಮತ್ತು ಚಾರಿಟಬಲ್ ಟ್ರಸ್ಟ್‌ ಮಂಜುನಾಥ್ ನಿರೂಪಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com