Breaking News

ಕಾರವಾರ ಅರ್ಬನ್ ಕೋ ಅಪರೇಟಿವ್ ಬ್ಯಾಂಕ್ ನಲ್ಲಿ 54 ಕೋಟಿ ಅವ್ಯವಹಾರ, ಪಾಸ್‌ ಬುಕ್‌ ಹಿಡಿದು ಹಣಕ್ಕಾಗಿ ಗ್ರಾಹಕರು ದೌಡು

 

ಕಾರವಾರ: ಕೋ ಅಪರೇಟಿವ್‌  ಬ್ಯಾಂಕ್‌ ಗಳ ಅವ್ಯವಹಾರ ಪಟ್ಟಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅರ್ಬನ್ ಕೋ ಅಪರೇಟಿವ್ ಬ್ಯಾಂಕ್ ಕೂಡ ಸೇರಿಕೊಂಡಿದೆ. ಬ್ಯಾಂಕ್‌ ಮ್ಯಾನೇಜರೊಬ್ಬರ ಸಾವಿನ ನಂತರ ಸುಮಾರ 54 ಕೋಟಿಯಷ್ಟು ಹಣ ಗೋಲ್‌ ಮಾಲ್‌ ಆಗಿರುವುದು ಬ್ಯಾಂಕ್‌ ಆಡಳಿತ ಮಂಡಳಿಗೆ ತಿಳಿದು ಬಂದಿದ್ದು, ಇದರ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪರಿಣಾಮ ಬ್ಯಾಂಕ್‌ ನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ಆತಂಕದಿಂದ ಬ್ಯಾಂಕ್‌ ಗೆ ಪಾಸ್‌ ಬುಕ್‌ ಹಿಡಿದು ಹಣ ವಿಥ್‌ ಡ್ರಾ ಮಾಡಿಕೊಳ್ಳಲು ದೌಡಾಯಿಸುತ್ತಿದ್ದು, ಬ್ಯಾಂಕ್‌ ಮಾತ್ರ ಗ್ರಾಹಕರು ಇಟ್ಟಿರುವ ಠೇವಣಿಗೆ ಯಾವುದೇ ತೊಂದರೆಯೇ ಇಲ್ಲ ಎಂಬ ಅಭಯ ನೀಡುತ್ತಿದ್ದು, ಗ್ರಾಹಕರ ಆತಂಕ ಮಾತ್ರ ದೂರ ಆಗಿಲ್ಲ.

ಸಾಕಷ್ಟು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ತನ್ನದೇ ನೆಟ್‌ ವರ್ಕ್‌ ಬ್ಯಾಂಕಿಂಗ್‌ ಜಾಲ ಹೊಂದಿರುವ ಬ್ಯಾಂಕ್‌ ನಲ್ಲಿ 54 ಕೋಟಿ ರೂಪಾಯಿ ವಂಚನೆ ಆಗಿರುವ ಬಗ್ಗೆ ಬ್ಯಾಂಕ್ ಆಡಳಿತ ಮಂಡಳಿ ಇದೀಗ ಪ್ರಕರಣ ದಾಖಲಿಸಿದೆ.

ಕಾರವಾರ ಅರ್ಬನ್‌  ಕೋ ಅಪರೇಟಿವ್ ಬ್ಯಾಂಕ್‌ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ಗುರುದಾಸ್ ಬಾಂದೇಕರ್ ಅವರು ನಾಲ್ಕು ವರ್ಷಗಳಿಂದ ಬ್ಯಾಂಕ್‌ ನಲ್ಲಿ ಠೇವಣಿ ಇಡಲಾಗಿದ್ದ 54 ಕೋಟಿ ರೂಪಾಯಿ ಹಣವನ್ನ ತಮ್ಮ ಸಂಬಂಧಿಗಳು ಹಾಗೂ ಪರಿಚಯದವರ ಖಾತೆಗಳಿಗೆ ವರ್ಗಾವಣೆ ಮಾಡಿ  ಬ್ಯಾಂಕ್‌ ಗೆ ವಂಚನೆ ಮಾಡಿದ್ದಾರೆ ಎಂದು ಆಡಳಿತ ಮಂಡಳಿ ದೂರು ನೀಡಿದೆ.

  1.  

ಬ್ಯಾಂಕ್‌ ನಲ್ಲಿ ಪ್ರತಿ ಬಾರಿ ಲೆಕ್ಕಪತ್ರಗಳ ವ್ಯವಹಾರ ನಡೆಯುವಾಗಲು ಗುರುದಾಸ್‌ ಬಾಂದೇಕರ್‌ ‌ಅವರು ಬ್ಯಾಂಕ್‌ ಗೆ ಮೋಸ ಮಾಡಿ, ಲೆಕ್ಕಪತ್ರಗಳನ್ನು ತಯಾರಿಸಿದ್ದಾರೆ. ಬ್ಯಾಂಕ್‌ ಆಡಳಿತ ಮಂಡಳಿಗೂ ತಿಳಿಯದಂತೆ ರಹಸ್ಯ ಕಾಯ್ದುಕೊಂಡು ಬಂದಿದ್ದರು. ಆದರೆ ವರ್ಷದ ಹಿಂದೆ ಗುರುದಾಸ್ ಬಾಂದೇಕರ್‌ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈಗ ಬ್ಯಾಂಕ್‌ ಲೆಕ್ಕಪತ್ರಗಳನ್ನು ಮಾಡಲು ಮುಂದಾಗಿದ್ದ ವೇಳೆ 54 ಕೋಟಿ ರೂಪಾಯಿ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಬ್ಯಾಂಕ್‌ ಆಡಳಿತ ಮಂಡಳಿ ತಿಳಿಸಿದೆ.

ಕಾರವಾರದಲ್ಲಿ ಎರಡು ಅರ್ಬನ್‌ ಬ್ಯಾಂಕ್‌ ಶಾಖೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಸಾವಿರಕ್ಕೂ ಅಧಿಕ ಗ್ರಾಹಕರು ಬ್ಯಾಂಕ್‌ ನಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಅಂದಾಜು 80 ಕೋಟಿಗೂ ಅಧಿಕ ಹಣ ಠೇವಣಿ ಇದ್ದು, 9 ಕೋಟಿ ರೂಪಾಯಿಗಳ ಸಾಲವನ್ನು ಬ್ಯಾಂಕ್‌ ನಿಂದ ಗ್ರಾಹಕರಿಗೆ ನೀಡಲಾಗಿದೆ.

ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು 54 ಕೋಟಿ ಅವ್ಯವಹಾರ ಆಗಿರುವ ಬಗ್ಗೆ ತಿಳಿಯುತ್ತಲೇ ಬ್ಯಾಂಕ್‌ ನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ಹಣ ವಿಥ್‌ ಡ್ರಾ ಮಾಡಿಕೊಳ್ಳಲು ಮುಗಿ ಬಿದ್ದಿದ್ದಾರೆ. ಬ್ಯಾಂಕ್‌ ಖಾತೆಯಲ್ಲಿ ಇರುವ ಪಡೆಯುವುದಕ್ಕೆ ಪರದಾಟ ನಡೆಸುತ್ತಿದ್ದು, ಬ್ಯಾಂಕ್‌ ನಲ್ಲಿ ಸಾಕಷ್ಟು ಹಣ ಇಲ್ಲದೇ ಇರುವುದರಿಂದ ಬಂದ ಗ್ರಾಹಕರಿಗೆ 10 ಸಾವಿರದಂತೆ ಮಾತ್ರ ವಿಥ್‌ ಡ್ರಾವಲ್‌ ನೀಡಿ ಕಳುಹಿಸಲಾಗುತ್ತಿದೆ.

ಬ್ಯಾಂಕ್‌ ದಿವಾಳಿ ಆಗಿಲ್ಲ, ಗ್ರಾಹಕರು ಯಾವುದೇ ರೀತಿಯಲ್ಲಿ ಭಯ ಪಡುವುದು ಬೇಡ. ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com