ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟ ಆಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯೇ ಟಾಪರ್ ಆಗಿ ಹೊರಹೊಮ್ಮಿದ್ದು, ಎರಡನೇ ಸ್ಥಾನವು ಉಡುಪಿ ಜಿಲ್ಲೆಯ ಪಾಲಾಗಿದೆ. ಉತ್ತರ ಕನ್ನಡ ಜಿಲ್ಲೆ ನಾಲ್ಕನೇ ಸ್ಥಾನಕ್ಕೆ ಖುಷಿ ಪಡೆಬೇಕಾಗಿದೆ. ಇನ್ನೂ ಗದಗ ಜಿಲ್ಲೆಗೆ ಕೊನೆ ಸ್ಥಾನ ಸಿಕ್ಕಿದೆ.
ಕಲಾ ವಿಭಾಗದಲ್ಲಿ ಬೆಂಗಳೂರಿನ ಮೇಧಾ.ಡಿ. ಮೊದಲ ಸ್ಥಾನ ಪಡೆದುಕೊಂಡಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾಲಕ್ಷ್ಮೀ ಮೊದಲ ಸ್ಥಾನ ಪಡೆದುಕೊಂಡಿದ್ದು, 598 ಅಂಕ ಗಳಿಸಿದ್ದಾಳೆ.
ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ತುಳಸಿ ಪೈ 596 ಪಡೆದು ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ಪಡೆದುಕೊಂಡಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಈ ರ್‍ಯಾಂಕ್ ಬಂದಿರುವುದು ಖುಷಿ ತಂದಿದೆ ಎಂದು ತುಳಸಿ ಪೈ ಸಂತಸ ಹಂಚಿಕೊಂಡರು.
ತುಳಸಿ ಪೈ ಅವರು ಉದ್ಯಮಿ ವಿವೇಕ್ ಪೈ ಮತ್ತು ವಿನಿತಾ ದಂಪತಿ ಪುತ್ರಿ.
‘ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸು ಇದೆ. ನಾನು ಈವರೆಗೆ ಯಾವುದೇ ಟ್ಯೂಷನ್ ಹೋಗಿಲ್ಲ. ದಿನದಲ್ಲಿ ನಾಲ್ಕು ತಾಸು ಓದುತ್ತಿದ್ದೇ. ಓದಿದ್ದು ಸರಿಯಾಗಿ ಮನದಟ್ಟು ಮಾಡಿಕೊಳ್ಳುತ್ತಿದ್ದೆ. ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 624 ಅಂಕ ಬಂದಿತ್ತು ಎಂದು ತುಳಸಿ ಪೈ ಹೇಳಿದರು.
ಇದೇ ಕಾಲೇಜಿನ ವಿದ್ಯಾರ್ಥಿನಿ ಸಮೃದ್ಧಿ 594 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ನಾಲ್ಕನೇ ರ್‍ಯಾಂಕ್ ಪಡೆದಿದ್ದಾರೆ. ಉದ್ಯಮಿ ಶರತ್ ನಾಯಕ್ ಮತ್ತು ಲಲಿತಾ ಪ್ರಿಯಾ ದಂಪತಿ ಪುತ್ರಿ.