Breaking News

ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೈಕಲ್ ಡಿಸೋಜ ವಿಶನ್ ಕೊಂಕಣಿ ಪುಸ್ತಕ ಕಾರ್ಯಕ್ರಮ

 

ಮಂಗಳೂರು: ಲೇಖಕರು ವೈಜ್ಞಾನಿಕ ಮನೋಭಾವ, ತಾರ್ಕಿಕತೆ ಮತ್ತು ಸಂವೇದನಾಶೀಲತೆ ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಸಾಹಿತ್ಯ ಕೃತಿ ರಚಿಸಲು ಸಾಧ್ಯ. 25 ಮಿಲಿ ಸುಗಂಧ ದ್ರವ್ಯ ತಯಾರಿಸಲು ಸಾವಿರಾರು ಹೂವಿನ ಪಕಳೆಗಳನ್ನು ಅರೆಯಬೇಕಾಗುತ್ತದೆ. ಒಂದು ಸಾಹಿತ್ಯ ಕೃತಿ ರಚನೆಯ ಹಿಂದೆ ಸಾವಿರಾರು ಪುಟಗಳ ಓದು, ಅಭ್ಯಾಸ ಇರುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಗೋವಾದ ಹಿರಿಯ ಸಾಹಿತಿ ದತ್ತಾ ದಾಮೋದರ ನಾಯಕ್ ಹೇಳಿದರು.

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆದ ಮೈಕಲ್ ಡಿಸೋಜ ವಿಶನ್ ಕೊಂಕಣಿ ಪುಸ್ತಕ ಪ್ರಕಟಣೆ ಯೋಜನೆ ಅಡಿ ಆಯ್ಕೆಯಾದ ಲೇಖಕರ ಬಳಗವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬರವಣಿಗೆ ಭಾಷೆ ಸಾಧ್ಯವಾದಷ್ಟು ಸರಳ ಮತ್ತು ಹೃದಯಕ್ಕೆ ಹತ್ತಿರ ಆಗಿರಬೇಕು. ಆಗ ಮಾತ್ರ ಓದುಗನಿಗೆ ಓದುವ ಅನುಭೂತಿ ಸಿಗುತ್ತದೆ. ಅತಿಯಾದ ಅಲಂಕಾರ, ಸಾಂಕೇತಿಕತೆ, ಪ್ರತಿಮೆ – ಪ್ರತೀಕಗಳನ್ನು ಹೇರಿಕೊಂದು ರಚಿಸಿದ ಸಾಹಿತ್ಯ ಕೃತಿಯಿಂದ ಓದುಗರು ವಿಮುಖರಾಗುವ ಸಾಧ್ಯತೆಗಳು ಹೆಚ್ಚು. ಓದುಗ ಪುಸ್ತಕ ಓದುವುದು ಅವನ ಸುಖಕ್ಕಾಗಿ ಹೊರತು ನಮಗಾಗಿ ಅಲ್ಲ ಎಂಬುದನ್ನು ಪುಸ್ತಕ ಲೇಖಕರೂ, ಪ್ರಕಾಶಕರೂ ಅರ್ಥ ಮಾಡಿಕೊಳ್ಳಬೇಕು. ಒಂದು ಉತ್ತಮ ಪುಸ್ತಕ ರೂಪಿಸುವಲ್ಲಿ ಪ್ರಕಾಶಕನ ಕೆಲಸವೂ ಗಮನಾರ್ಹ. ಪುಸ್ತಕ ಪ್ರಕಾಶನ ಅದು ಬರೀ ಪ್ಯಾಕೇಜಿಂಗ್ ಕೆಲಸ ಮಾತ್ರವಲ್ಲ ಎಂದರು.

ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಬಸ್ತಿ ವಾಮನ್ ಶೆಣೈ ಅವರ ಪ್ರತಿಮೆಗೆ ಹಾರಾರ್ಪಣೆ ಮತ್ತು ದೀಪ ಪ್ರಜ್ವಲನೆ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಪತ್ರಕರ್ತ ಎಚ್ಚೆಮ್ ಪೆರ್ನಾಲ್ ಅಧ್ಯಕ್ಷತೆಯಲ್ಲಿ ನಡೆದ “ಪುಸ್ತಕ ಪಂಚಾತಿಕೆ” ಎಂಬ ಸಂವಾದ ಕಾರ್ಯಕ್ರಮ ನಡೆಯಿತು.

ಹಿರಿಯ ಲೇಖಕಿ ಶಕುಂತಲಾ ಆರ್. ಕಿಣಿ, ಶ್ರೀ ಎಡ್ಡಿ ಸಿಕ್ವೇರಾ ಲೇಖಕರ ಪರವಾಗಿ, ಪಯ್ಯನ್ನೂರು ರಮೇಶ ಪೈ ಮತ್ತು ಸಂತ ಅಲೋಶಿಯಸ್ ಪ್ರಕಾಶನದ ನಿರ್ದೇಶಕಿ ಡೊ. ವಿದ್ಯಾ ವಿನುತ ಡಿಸೊಜ ಪ್ರಕಾಶಕರ ಪರವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

  1.  

ಪುಸ್ತಕ ಪ್ರಕಾಶನ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಲೇಖಕ ಮತ್ತು ಪ್ರಕಾಶಕರ ಜವಾಬ್ದಾರಿ, ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಲಭ್ಯ ಇರುವ ಪರಿಹಾರ ಮಾರ್ಗೋಪಾಯಗಳ ಕುರಿತು ಸಂವಾದದಲ್ಲಿ ಮುಕ್ತವಾಗಿ ಚರ್ಚಿಸಲಾಯಿತು.

ವಿಶ್ವ ಕೊಂಕಣಿ ಮೈಕಲ್ ಡಿಸೋಜ ವಿಶನ್ ಕೊಂಕಣಿ ಪುಸ್ತಕ ಪ್ರಾಧಿಕಾರದ ಸಂಪಾದಕ ಮಂಡಳಿ ಸದಸ್ಯ ಕವಿ/ ಚಿಂತಕ ಟೈಟಸ್ ನೊರೊನ್ಹಾ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸುವುದರ ಜೊತೆಗೆ ಮೈಕಲ್ ಡಿಸೋಜ ವಿಶನ್ ಕೊಂಕಣಿ ಕಾರ್ಯಕ್ರಮದ ಕುರಿತು ವಿಸ್ತಾರ ಮಾಹಿತಿ ನೀಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗ ಮುಖ್ಯಸ್ಥ ಹಾಗೂ ಸಂಪಾದಕ ಮಂಡಳಿ ಸದಸ್ಯ ಕವಿ ಮೆಲ್ವಿನ್ ರೊಡ್ರಿಗಸ್ ಪುಸ್ತಕ ಅನುದಾನಕ್ಕೆ ಆಯ್ಕೆಯಾದ ಕೃತಿ ಮತ್ತು ಲೇಖಕರ ಹೆಸರುಗಳ ಘೋಷಣೆ ಮಾಡಿದರು. ಗೋವಾ, ಮಹಾರಾಷ್ಟ್ರ, ಕರ್ನಾಟಕ ಮಾತ್ರವಲ್ಲ ದೂರದ ಆಸ್ಟ್ರೇಲಿಯಾದಿಂದಲೂ ಕೊಂಕಣಿ ಸಾಹಿತಿಗಳ 21 ಕೃತಿಗಳು ಅನುದಾನಕ್ಕೆ ಆಯ್ಕೆಯಾಗಿದ್ದು, ಸಾಹಿತಿಗಳು ಮತ್ತು ಅವರ ಪ್ರತಿನಿಧಿಗಳು ಹಾಜರಿದ್ದು ಪ್ರಸ್ತಾಪಕ್ಕೆ ಸಹಿ ಮಾಡಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ, ಮೈಕಲ್ ಡಿಸೋಜ ವಿಶನ್ ಕೊಂಕಣಿ ಕಾರ್ಯಕ್ರಮದ ನಿರ್ದೇಶಕರೂ ಆಗಿರುವ ಸಿ.ಎ. ನಂದಗೋಪಾಲ ಶೆಣೈ ತಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಂಕಣಿ ಸಾಹಿತ್ಯಕ್ಕೆ ಉತ್ತೇಜನ ನಿಡುವುದು ಮತ್ತು ಆ ಮೂಲಕ ಕೊಂಕಣಿ ಭಾಷಾ ಸೇವೆ ಮಾಡುವುದು ವಿಶ್ವ ಕೊಂಕಣಿ ಕೇಂದ್ರದ ಮೂಲ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ ವಂದಿಸಿದರು. ಸುಚಿತ್ರಾ ಎಸ್. ಶೆಣೈ ನಿರೂಪಿಸಿದರು.
ವಿಶ್ವ ಕೊಂಕಣಿ ಕೇಂದ್ರದ ವಿಶ್ವಸ್ಥ ವಿಲಿಯಂ ಡಿಸೋಜ, ಡಾ. ಕಸ್ತೂರಿ ಮೋಹನ್ ಪೈ, ಖಜಾಂಜಿ ಬಿ. ಆರ್. ಭಟ್ ಮತ್ತು ಕಾರ್ಯ ನಿರ್ವಹಣಾ ಅಧಿಕಾರಿ ಡಾ. ಬಿ. ದೇವದಾಸ ಪೈ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com