Breaking News

ರಾಜ್ಯದ ಆರ್ಥಿಕ ಪರಿಸ್ಥಿತಿ ನಿಭಾಯಿಸುವಲ್ಲಿ ಸಿಎಂ ಸಿದ್ದರಾಮಯ್ಯ ವಿಫಲ: ಪ್ರತಾಪ್ ಸಿಂಹ ನಾಯಕ್

 

ಮಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು ಇದನ್ನು ಮರೆಮಾಚಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ ಡಿಆರ್ ಎಫ್ ಗಾಗಿ ಆರ್ಟಿಕಲ್ 32 ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವ ನಾಟಕ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿ ಬಳಿಕ ಈ ಯತ್ನ ನಡೆಸಿದ್ದಾರೆ. ಇದೂವರೆಗೆ ಅವರು ಏನು ಮಾಡುತ್ತಿದ್ದರು? ಬಜೆಟ್ ನಲ್ಲಿ ಘೋಷಣೆ ಮಾಡಿರುವ ಗುರಿಯನ್ನು ಶೇ 40 ರಷ್ಟು ಸಾಧಿಸುವುದಕ್ಕೂ ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗಿಲ್ಲ. ಕೃಷಿಕರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತೇವೆ ಎಂದಿದ್ದ ಸಾಲದ ಪ್ರಮಾಣವನ್ನು 3 ರಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಲು ಸಾಧ್ಯವಾಗಿಲ್ಲ. ಹಾಲು ಉತ್ಪಾದಕರಿಗೆ ನೀಡಬೇಕಿದ್ದ 1,200 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನವನ್ನು ಇದೂವರೆಗೂ ನೀಡಿಲ್ಲ ಎಂದರು.

15 ಬಜೆಟ್ ಗಳನ್ನು ಮಂಡಿಸಿದ್ದೇನೆ ಎಂದು ಹೇಳಿಕೊಳ್ಳುವ ಆರ್ಥಿಕ ತಜ್ಞ ಸಿದ್ದರಾಮಯ್ಯ ಹಣಕಾಸಿನ ನಿರ್ವಹಣೆಯಲ್ಲಿ ಸೋತಿರುವುದು ಎದ್ದು ಕಾಣುತ್ತದೆ. ಇದೇ ಮೊದಲ ಬಾರಿಗೆ ಕರ್ನಾಟಕ ಜಿಡಿಪಿ ಬೆಳವಣಿಗೆಯಲ್ಲಿ ಭಾರತದ ಸರಾಸರಿಗಿಂತ ಕೆಳಮಟ್ಟಕ್ಕೆ ಕುಸಿದಿದೆ. ಇದಕ್ಕೆ ಕೇಂದ್ರ ಸರಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

  1.  

ಸಿದ್ದರಾಮಯ್ಯ ರಾಜ್ಯದ ಮಧ್ಯಂತರ ಆರ್ಥಿಕ ಯೋಜನೆ ವರದಿಯಲ್ಲಿ ಸಮರ್ಪಕ ಅಂಕಿ- ಅಂಶ ನೀಡುತ್ತಾರೆ. ಆದರೆ ಬೀದಿಗೆ ಬಂದು ಮಾತನಾಡುವಾಗ ಕೇಂದ್ರದ ವಿರುದ್ಧ ಮಾತನಾಡುತ್ತಾರೆ. ಈ ವರದಿ ಒಂದು ಕಡೆ 2021-22ಕ್ಕೆ ಹೋಲಿಸಿದರೆ 2022-23ರಲ್ಲಿ ಕೇಂದ್ರ ಸರಕಾರದ ಒಟ್ಟು ತೆರಿಗೆ ಸ್ವೀಕೃತಿಯು ಶೇ 12.6ರಷ್ಟು ಹೆಚ್ಚಳವಾಗಿದೆ ಎಂದಿದ್ದಾರೆ. ಇದನ್ನು ಇದೇ ಫೆಬ್ರವರಿಯಲ್ಲಿ ವಿಧಾನಸಭೆಯಲ್ಲೂ ಮಂಡಿಸಿದ್ದಾರೆ. 2022-23ರಲ್ಲಿ ಕೇಂದ್ರದಿಂದ ಪುರಸ್ಕೃತ ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ 16,579 ಕೋಟಿ ರೂ. ಸಹಾಯಧನ ಸ್ವೀಕೃತವಾಗಿದೆ ಎಂದರು.

6,739 ಕೋಟಿ ರೂ.ಗಳನ್ನು ಇಲಾಖೆಗಳ ಎನ್ಎಸ್ಎ ಖಾತೆಗಳಿಗೆ ನೇರವಾಗಿ ಬಿಡುಗಡೆ ಮಾಡಿದೆ. ವಿವಿಧ ಬಂಡವಾಳ ಯೋಜನೆಗಳಿಗೆ ಕೇಂದ್ರವು 3,399 ಕೋಟಿ ರೂ. ಬಡ್ಡಿರಹಿತ ಸಾಲವನ್ನು ಬಿಡುಗಡೆ ಮಾಡಿದೆ. 22-23ರ ಆಯವ್ಯಯದಲ್ಲಿ ಅಂದಾಜಿಸಿದ ಜಿಎಸ್ ಟಿ ಪರಿಹಾರದ ಮೊತ್ತವು 5 ಸಾವಿರ ಕೋಟಿ ರೂ.ಗೆ ಬದಲಾಗಿದೆ. ಕೇಂದ್ರ ಸರರಕಾರದಿಂದ 20,288 ಕೋಟಿ ರೂ. ಸ್ವೀಕೃತವಾಗಿದ್ದು, ರಾಜ್ಯದ ರಾಜಸ್ವ ಸ್ವೀಕೃತಿ ಹೆಚ್ಚಾಗಿದೆ ಎಂದು ಅಧಿಕೃತ ದಾಖಲೆಗಳಲ್ಲಿ ಅವರೇ ಬರೆದುಕೊಂಡಿದ್ದಾರೆ. ಆದರೆ ಹೊರಗೆ ಬಂದು ಕೇಂದ್ರ ಸರಕಾರ ಹಣ ನೀಡುತ್ತಿಲ್ಲ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಚುನಾವಣೆ ನಿರ್ವಹಣಾ ಸಮಿತಿಯ ದೇವದಾಸ್ ಶೆಟ್ಟಿ ಹಾಗೂ ದ.ಕ. ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ವಸಂತ ಜೆ. ಪೂಜಾರಿ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com