Breaking News

ಕರಾವಳಿಯಲ್ಲಿ ಲೋಕಾ ಗೆಲುವಿಗೆ ಕಾಂಗ್ರೆಸ್ ಶಕ್ತಿ ಪ್ರದರ್ಶನ, ಕಾರ್ಯಕರ್ತರ ಸಮಾವೇಶ

 

ಮಂಗಳೂರು:  ಕರಾವಳಿ ಮಂಗಳೂರಿನಲ್ಲಿ ಶನಿವಾರ (ಫೆ 17 ರಂದು) ನಡೆಯುವ ಕಾಂಗ್ರೆಸ್ ಸಮಾವೇಶಕ್ಕೆ ಬೇಕಾದ ಎಲ್ಲ ಸಿದ್ದತೆಗಳು ಆಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಸತತ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಹುರು‍ಪು ನೀಡುವ ಸಲುವಾಗಿಯೇ ಈ ಸಮಾವೇಶ ನಡೆಸಲಾಗುತ್ತಿದ್ದು, ಈ ಮೂಲಕ ಕೈ ಪಡೆ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದೆ.

ಬಿಜೆಪಿ ಮತಬುಟ್ಟಿಗೆ ಕೈ ಹಾಕುವ ಉದ್ದೇಶದಿಂದಲೇ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೈ ಕಾರ್ಯಕರ್ತರಲ್ಲಿ ಲೋಕಸಭಾ ಚುನಾವಣೆಗೆ ಹುಮ್ಮಸ್ಸು ತರುವ ಸಲುವಾಗಿಯೇ ಚುನಾವಣಾ ತಂತ್ರಗಳನ್ನು ಹೆಣೆಯಲಾಗುತ್ತಿದೆ. ಎಐಸಿಸಿ ಸೇರಿದಂತೆ ರಾಜ್ಯದ ಘಟಾನುಘಟಿ ನಾಯಕರು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಹಲವು ನಾಯಕರು ಆಗಮಿಸುತ್ತಿರುವುದು ಕೈ ಕಾರ್ಯಕರ್ತರಲ್ಲಿ ಹೊಸ ಗಾಳಿಯನ್ನು ಬೀಸಿದೆ.

ಫೆ.17ರಂದು ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ವಿಮಾನದ ಮೂಲಕ ಕಾಂಗ್ರೆಸ್ ನಾಯಕರು ಬರುತ್ತಿದ್ದಾರೆ. ಮಧ್ಯಾಹ್ನ 2.15 ಕ್ಕೆ ಅಡ್ಯಾರ್‌ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆವ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

  1.  

ಡ್ರೋನ್ ಹಾರಾಟ ನಿರ್ಬಂಧ ವಿಧಿಸಿದ ಕಮಿಷನರ್:  ಫೆ.17 ರ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಆವರಣದ ಸುತ್ತ  ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟಕ್ಕೆ ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಆದೇಶಿಸಿದ್ದಾರೆ. ಮುಖ್ಯಮಂತ್ರಿ ಅವರ ಸುರಕ್ಷತೆ ಮತ್ತು ಭದ್ರತೆ ಹಿತದೃಷ್ಟಿಯಿಂದ ನಿಷೇಧಿಸಲಾಗಿದೆ. ಇನ್ನೂ ಕಾರ್ಯಕ್ರಮದ ಬಳಿಕ ವಾಮಂಜೂರಿನ ತಿರುವೈಲ್‍ನಲ್ಲಿ ಕಂಬಳದಲ್ಲಿ ಸಿದ್ದರಾಮಯ್ಯ ಭಾಗವಹಿಸಲಿರುವ ಹಿನ್ನೆಲೆ ವಾಮಂಜೂರಿನ ತಿರುವೈಲಿನಲ್ಲಿ ಕಂಬಳ ಕಾರ್ಯಕ್ರಮದ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ರೆಡ್‍ಜೋನ್ ಎಂದು ಪರಿಗಣಿಸಿ ಡ್ರೋನ್ ಹಾರಾಟ ನಿರ್ಬಂಧಿಸಲಾಗಿದೆ.

ಸಂಚಾರದಲ್ಲಿ ಬದಲಾವಣೆ: ಸಮಾವೇಶದ ಹಿನ್ನಲೆಯಲ್ಲಿ ಕಾರ್ಯಕ್ರಮ ನಡೆಯುವ ಅಡ್ಯಾರ್ ಮೈದಾನದ ಬಳಿ ಫೆ.17 ರ ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಸಂಚಾರ ಬದಲಾವಣೆ ಮಾಡಲಾಗಿದೆ. ಉಡುಪಿ ಕಡೆಯಿಂದ ಬೆಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ನಂತೂರು- ಪಂಪ್‌ವೆಲ್- ತೊಕ್ಕೊಟ್ಟು-ದಿಡುಪು -ಮೆಲ್ಕಾರ್ ಮೂಲಕ ಸಂಚರಿಸುವುದು. ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ಮೆಲ್ಲಾರ್-ಮುಡಿಪು-ತೊಕ್ಕೊಟ್ಟು-ಪಂಪ್‌ವೆಲ್ ಮೂಲಕ ಸಂಚರ ಮಾಡುಬೇಕು ಎಂದು ತಿಳಿಸಲಾಗಿದೆ.

ಪಾರ್ಕಿಂಗ್ ಗೆ ವ್ಯವಸ್ಥೆ: ಬಂಟ್ವಾಳದಿಂದ ಬರುವ ಗಣ್ಯರ ಕಾರುಗಳು ಹಾಗೂ ಸಾರ್ವಜನಿಕರ ಬೈಕ್ ಗಳನ್ನು ಕಾಮತ್ ಮೈದಾನದಲ್ಲಿ ಪಾರ್ಕಿಂಗ್​​ಗೆ ವ್ಯವಸ್ಥೆ ಮಾಡಲಾಗಿದೆ. ಬಂಟ್ವಾಳದಿಂದ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ಕಾರುಗಳನ್ನು ಅಡ್ಯಾರ್‌ನ ಕರ್ಮಾರ್ ಮೈದಾನದಲ್ಲಿ ಪಾರ್ಕಿಂಗ್. ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ ಗಳು ಕಾರ್ಯಕರ್ತರನ್ನು ಕಾಮತ್ ಪಾರ್ಕಿಂಗ್ ಬಳಿ ಇಳಿಸಿ ಮೋತಿ ಶ್ಯಾಮ್/ಷಾ ಮೈದಾನದಲ್ಲಿ ಪಾರ್ಕಿಂಗ್. ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಗಣ್ಯರ ಕಾರುಗಳನ್ನು ಅಡ್ಯಾರ್ ಗಾರ್ಡ್ ನಲ್ಲಿ ಪಾರ್ಕಿಂಗ್. ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ ಗಳು ಷಾ ಮೈದಾನದಲ್ಲಿ ಪಾರ್ಕಿಂಗ್ ಮತ್ತು ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬೈಕ್ ಗಳನ್ನು ಅಡ್ಯಾರ್ ಗಾರ್ಡನ್ ಮೈದಾನದಲ್ಲಿ ಪಾರ್ಕಿಂಗ್ ಹಾಗೂ ಅಡ್ಯಾರ್ ಕಟ್ಟೆಯಲ್ಲಿರುವ ಜಯಶೀಲ ಅವರ ಮೈದಾನದಲ್ಲಿ ಕೂಡ ಪಾರ್ಕಿಂಗ್ ಮಾಡಲು ಸೂಚಿಸಲಾಗಿದೆ.

ಘಟಾನುಘಟಿಗಳ ಹಾಜರಿ: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಮ್ ಅಹ್ಮದ್, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತು ವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಎಲ್ಲಾ ಸಚಿವರು, ಸಂಸದರರು, ಶಾಸಕರು, ಪದಾಧಿಕಾರಿಗಳು, ವಿಧಾನಸಭೆ ಅಭ್ಯರ್ಥಿಗಳು, ಆಕಾಂಕ್ಷಿಗಳು, ಎಐಸಿಸಿ, ಕೆಪಿಸಿಸಿ ಸದಸ್ಯರು, ಡಿಸಿಸಿ ಅಧ್ಯಕ್ಷರು ಸೇರಿದಂತೆ ಮುಂಚೂಣಿ ಘಟಕದ ಎಲ್ಲಾ ಹಂತದ ಅಧ್ಯಕ್ಷರು ಕಡ್ಡಾಯವಾಗಿ ಭಾಗಿಯಾಗಲು ಸೂಚನೆ ನೀಡಲಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com