Breaking News

ಶಾಸಕ ಕಾಮತ್‌, ಭರತ್‌ ಶೆಟ್ಟಿ ಅನುಚಿತ ವರ್ತನೆ, ಶಿಸ್ತು ಕ್ರಮಕ್ಕೆ ಕಾಂಗ್ರೆಸ್‌ ಆಗ್ರಹ

 

ಮಂಗಳೂರು: ನಗರದ ವೆಲೆನ್ಸಿಯಾ ಶಾಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿ ಅವರು ವಿಚಾರಣೆ ಮಾಡಲು ಅವಕಾಶ ಕಲ್ಪಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದರ ಬದಲು ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಶಾಸಕರಾಗಿಯೂ ಕರ್ತವ್ಯ ಲೋಪ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಮುಖ್ಯಮಂತ್ರಿ ಹಾಗೂ ಸ್ಪೀಕರ್ ಅವರಿಗೆ ದೂರು ನೀಡಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶಾಲೆಯಲ್ಲಿ ಶಿಕ್ಷಕಿ ಏನಾದರೂ ತಪ್ಪಾಗಿದ್ದರೆ ಶಿಕ್ಷಕಿ ವಿರುದ್ಧ ಸೂಕ್ತ ಕ್ರಮಕ್ಕಾಗಿ ದೂರು ನೀಡಿ ಬಳಿಕ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಅವಕಾಶ ನೀಡದೇ ವಿದ್ಯಾರ್ಥಿಗಳನ್ನು ಸೇರಿಸಿ ಶಾಲೆ ಆವರಣದಲ್ಲಿ ಶಿಕ್ಷಕರನ್ನು ಅವಮಾನಗೊಳಿಸಿ ನಿಂದಿಸಿರುವುದು, ಕೋಮು ದ್ವೇಷದ ಹೇಳಿಕೆ ನೀಡಿರುವುದು ಖಂಡನೀಯ. ಶಾಸಕರ ಈ ವರ್ತನೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಜೆ.ಆರ್.ಲೋಬೊ ಅವರು ಮಾತನಾಡಿ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾದ ಶಾಸಕರು ತಮ್ಮ ಹೊಣೆಗಾರಿಕೆ ಮರೆತು ವರ್ತಿಸಿದ್ದಾರೆ. ಅವರು ಶಾಸಕರಾಗಿ ಮುಂದುವರೆಯುವ ಅರ್ಹತೆ ಕಳೆದುಕೊಂಡಿದ್ದಾರೆ. ಆರು ದಶಕಗಳ ಇತಿಹಾಸ ಇರುವ ಸಂಸ್ಥೆಯ ಘನತೆಗೆ ಧಕ್ಕೆ ಉಂಟು ಮಾಡುವ ಕೆಲಸ ಶಾಸಕರಿಂದ ನಡೆದಿದೆ ಎಂದರು.

  1.  

ಮಂಗಳೂರಿನಲ್ಲಿ ಬಿಜೆಪಿ ಮೂಲಕ ಯೋಗೀಶ್ ಭಟ್, ಧನಂಜಯ ಕುಮಾರ್ ಜನಪ್ರತಿನಿಧಿಗಳಾಗಿದ್ದರು. ಆದರೆ, ಅವರು ಈ ಇಬ್ಬರು ಶಾಸಕರ ರೀತಿ ವರ್ತಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ.ವಿ.ಮೋಹನ್ ಆರೋಪಿಸಿದರು.

ಕಾಂಗ್ರೆಸ್ ಮುಖಂಡ ಎಂ.ಜಿ.ಹೆಗಡೆ ಮಾತನಾಡಿ, ಶಿಕ್ಷಕಿಯ ಮಾತುಗಳ ಬಗ್ಗೆ ಆಕ್ಷೇಪವಿದ್ದರೆ ಪೋಷಕರು ಶಾಲೆಗೆ ಬಂದು ದೂರು ನೀಡಲು ಅವಕಾಶವಿತ್ತು. ಈ ಬಗ್ಗೆ ವಿಚಾರಣೆ ನಡೆದು ಕ್ರಮ ಜರುಗಿಸಲು ಅವಕಾಶ ಇರುವಾಗ ಗೊಂದಲ ಸೃಷ್ಟಿಸಿ ಅದರ ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವ ಬಗ್ಗೆ ತನಿಖೆ ನಡೆಸಬೇಕು ಎಂದರು.

ಇಬ್ರಾಹಿಂ ಕೋಡಿಜಾಲ್, ಸದಾಶಿವ ಉಳ್ಳಾಲ್, ಎ ಸಿ ವಿನಾಯರಾಜ್, ನವೀನ್ ಡಿಸೋಜ, ಅಪ್ಪಿ ಲತಾ, ಜೆ. ಅಬ್ದುಲ್ ಸಲೀಂ, ಗಣೇಶ್ ಪೂಜಾರಿ, ಯು.ಟಿ ಫರ್ಝಾನಾ, ವಿಕಾಸ್ ಶೆಟ್ಟಿ, ಇಮ್ರಾನ್ ಎ. ಆರ್, ಶುಭೋದಯ ಆಳ್ವ, ಭಾಸ್ಕರ್ ರಾವ್ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com