Breaking News

ವಿದ್ಯಾರ್ಥಿಗಳ ವಾಂತಿ- ಭೇದಿ ಪ್ರಕರಣ, ಎಚ್ಚೆತ್ತ ಆರೋಗ್ಯ ಇಲಾಖೆ, ನೋಂದಣಿ ಕಡ್ಡಾಯ ಎಂದು ಚಾಟಿ ಬೀಸಿದ ಡಿಎಚ್‌ ಒ ಡಾ. ತಿಮ್ಮಯ್ಯ

 

ಮಂಗಳೂರು: ಜಿಲ್ಲೆಯಲ್ಲಿ ಇರುವ ಪೇಯಿಂಗ್ ಗೆಸ್ಟ್ ಗಳನ್ನು ಆಹಾರ ಸುರಕ್ಷತಾ ಕಾಯ್ದೆ ಅಡಿ ಆರೋಗ್ಯ ಇಲಾಖೆಯಲ್ಲಿ ನೋಂದಣಿ ಕಡ್ಡಾಯ ಎಂದು ಡಿಎಚ್‌ ಒ ಡಾ. ಎಚ್. ಆರ್. ತಿಮ್ಮಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆಹಾರ ಗುಣಮಟ್ಟ, ಸ್ವಚ್ಛತೆ ಕಾಪಾಡುವ ಸಲುವಾಗಿ ಜಿಲ್ಲೆಯ ಎಲ್ಲ ಸರಕಾರಿ ಮತ್ತು ಖಾಸಗಿ ವಸತಿ ನಿಲಯಗಳು, ಬಿಸಿಯೂಟ ನಡೆಸುವ ಶಾಲೆಗಳಿಗೆ ಕೆಲ ಮಾನದಂಡ ನಿಗದಿಪಡಿಸಲಾಗಿದೆ. ಆರೋಗ್ಯ ಸುರಕ್ಷೆಯ ದೃಷ್ಟಿಯಿಂದ ನೋಂದಣಿ ಕಡ್ಡಾಯ ಎಂದು ತಿಳಿಸಿದರು.

ಜಿಲ್ಲೆಯ ಕೆಲವು ಖಾಸಗಿ ನರ್ಸಿಂಗ್ ಕಾಲೇಜುಗಳ ವಸತಿ ನಿಲಯಗಳಲ್ಲಿ ಈಚೆಗೆ ವಾಂತಿ-ಬೇಧಿ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ. ಈ ಕುರಿತು ಮಾಹಿತಿ ನೀಡುವಂತೆ ಸಂಬಂಧಿಸಿದ ಇಲಾಖೆಯ ಪ್ರಮುಖರು, ವಸತಿ ನಿಲಯಗಳ ಪ್ರಮುಖರ ಸಭೆ ಕರೆಯಲಾಗಿದೆ ಎಂದರು.

  1.  

ವಳಚ್ಚಿಲ್‌ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿ, ಅಲ್ಲಿನ ಅಡುಗೆ ಕೋಣೆಗೆ ಬಾಗಿಲು ಹಾಕಲಾಗಿದೆ. ದಾಸ್ತಾನು ಕೊಠಡಿಯಲ್ಲಿ ದಿನಸಿ, ತರಕಾರಿಗಳು, ಆಹಾರ ಪದಾರ್ಥಗಳ ಸ್ವಚ್ಛತೆ ಕಾಪಾಡುವ ಜತೆಗೆ, ಇಲಿ, ಹೆಗ್ಗಣ, ಹಲ್ಲಿ ಕ್ರಿಮಿ ಕೀಟಗಳ ಹಾವಳಿ ಇರದಂತೆ ಎಚ್ಚರಿಕೆ ವಹಿಸಬೇಕು. ಎಲ್ಲ ವಸತಿ ನಿಲಯಗಳು ಪಾಲಿಸಬೇಕಾದ ನಿಯಮಗಳನ್ನು ಕಳುಹಿಸಲಾಗಿದ್ದು, ಇದು ಬಿಸಿಯೂಟ ಒದಗಿಸುವ ಶಾಲೆಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದರು.

ಅಡುಗೆ ಕೋಣೆಯಲ್ಲಿ ಗಾಳಿ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಕುಡಿಯಲು ಮತ್ತು ಅಡುಗೆಗೆ ಬಳಸುವ ನೀರು ಶುದ್ಧವಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಅಡುಗೆ ಮಾಡುವವರು, ಸಹಾಯಕರು, ಊಟ ಬಡಿಸುವವರು ಕಡ್ಡಾಯವಾಗಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಬೇಕು ಎಂದರು.

ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ಕುಮಾರ್ ಸಿ.ಎಚ್ , ಡಾ. ಸುದರ್ಶನ್ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com