Breaking News

ಭ್ರಷ್ಟ ಕುಳಗಳಿಗೆ ಬಲೆ ಬೀಸಿದ ಲೋಕಾಯುಕ್ತ, ದಾಳಿಯ ವೇಳೆ ಕೋಟಿ ಕೋಟಿ ಆಸ್ತಿ ಪತ್ತೆ…

 

ಬೆಂಗಳೂರು: ರಾಜ್ಯದಲ್ಲಿ ಬೆಳಂಬೆಳಿಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಲೋಕೋಪಯೋಗಿ, ಪಂಚಾಯಿತಿ ಅಭಿವೃದ್ಧಿ, ಬೆಸ್ಕಾಂ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧದ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಂಗಳೂರು, ರಾಮನಗರ ಹಾಗೂ ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ರಾಜ್ಯದ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸುತ್ತಿದೆ.

ಕುಂದಣ ಪಿಡಿಒ ಪದ್ಮನಾಭ​ ಅವರಿ​ಗೆ ಸೇರಿದ​​​​ ಮೂರು ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪರಿಶೀಲಿಸುತ್ತಿದ್ದಾರೆ. ಜತೆಗೆ ದಾಬಸ್​ಪೇಟೆ ಹಾಗೂ ತುಮಕೂರಿನಲ್ಲೂ ಪದ್ಮನಾಭ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ಮುಂದುವರೆದಿದೆ.

ಮಲ್ಲೇಶ್ವರಂನ ನಿವಾಸ, ಸಪ್ತಗಿರಿ ಲೇಔಟ್ ಬಳಿಯ ಎಜಿಬಿ ಲೇಔಟ್‌ನಲ್ಲಿ ಇರುವ 4 ಅಂತಸ್ತಿನ ಮನೆ, ತುಮಕೂರು ಜಿಲ್ಲೆ ಅನುಪನಹಳ್ಳಿಯಲ್ಲಿರುವ ಫಾರ್ಮ್ ಹೌಸ್, 5 ಎಕರೆ ಕೃಷಿ ಭೂಮಿ, ಸೋಂಪುರದಲ್ಲಿರುವ ವಾಣಿಜ್ಯ ಕಟ್ಟಡ, ದಾಬಸ್‌ಪೇಟೆ, ಸೋಂಪುರದಲ್ಲಿ ಕೈಗಾರಿಕಾ ಶೆಡ್​ಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಬೆಸ್ಕಾಂ ಮುಖ್ಯ ವ್ಯವಸ್ಥಾಪಕ ನಾಗರಾಜ್ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

  1.  

ನಾಗರಾಜ್ ಅವರಿಗೆ ಸೇರಿದ ಸಿವಿ ರಾಮನ್ ನಗರದ ನಾಗವಾರಪಾಳ್ಯದ ಮನೆ, ನಾಗರಾಜ್ ವಾಸವಿದ್ದ ಕ್ವಾಟ್ರಸ್, ಬಳ್ಳಾರಿಯ ಹುಟ್ಟೂರಿನಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ನಾಗರಾಜ್ ಅವರು ಕೂಡ್ಲಿಗಿ ಪಟ್ಟಣ, ಗುಡೇಕೋಟೆ ಗ್ರಾಮದಲ್ಲಿ ಅಕ್ರಮ ಆಸ್ತಿ, ಪೆಟ್ರೋಲ್ ಬಂಕ್, ಮನೆ, ಜಮೀನು ಹೊಂದಿರುವ ಆರೋಪವಿದೆ.

ನಾಗರಾಜ್ ಅವರು ಕೆಲ ದಿನಗಳ ಹಿಂದೇಯಷ್ಟೇ 7.50 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದಲ್ಲದೆ ಮಂಡ್ಯ ಮೂಲದ ಬಿಬಿಎಂಪಿ ಅಧಿಕಾರಿ ಮಂಜೇಶ್ ಹಾಗೂ ಅವರ ಸಂಬಂಧಿಕರ ಮನೆ ಮೇಲೆ, ಬೆಸ್ಕಾಂ ಎಇಇ ಅಹಮದ್, ಸೂಪರಿಂಡೆಂಟ್ ಎನ್. ಸತೀಶ್, ಬೆಂಗಳೂರು ದಕ್ಷಿಣ ಚೆನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಅವರಿಗೆ ಸೇರಿದ ಆಸ್ತಗಳ ಶೋಧ ಕಾರ್ಯವು ಮುಂದುವರೆದಿದೆ.

ಚಿತ್ರದುರ್ಗ ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರ ಮೂಲದ ಪಿಡಬ್ಲೂಡಿ ಎಂಜಿನಿಯರ್​ ಸತೀಶ್​ ಬಾಬು ಅವರ ಜೆಸಿಆರ್ ಬಡಾವಣೆಯಲ್ಲಿ ಇರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ.

ಈ ಹಿಂದೆ ಸತೀಶ್ ಬಾಬು ಅವರು ಚಿತ್ರದುರ್ಗದಲ್ಲಿ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ಮತ್ತು ಚಿತ್ರದುರ್ಗದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಿವೃತ್ತ ಮುಖ್ಯ ಶಿಕ್ಷಕರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಬಿಇಒ ಕಚೇರಿ ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್ ಅವರು ಲೋಕಾಯುಕ್ತ ದಾಳಿಗೆ ಬಿದ್ದಿದ್ದಾರೆ. ತರೀಕೆರೆ ತಾಲೂಕು ಹೊಸಗಂಗೂರು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಎನ್. ಪರಮೇಶ್ ತಮ್ಮ ನಿವೃತ್ತಿ ನಂತರ ಸರ್ಕಾರದಿಂದ ಬರಬೇಕಾದ ಜಿಪಿಎಫ್, ಜಿಐಎಸ್ ಪಡೆದುಕೊಳ್ಳಲು ಬಿಇಒ ಕಚೇರಿಗೆ ತೆರಳಿದ ವೇಳೆ 40 ಸಾವಿರ ಲಂಚಕ್ಕೆ ಬೇಡಿಕೆ ಇಡಲಾಗಿತ್ತು.
ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್​ ಮುಖ್ಯ ಶಿಕ್ಷಕನಿಂದ 40 ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com