Breaking News

ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಬಡವರ ಬದುಕಿಗೆ ಆಸರೆ: ವಿ. ಸುದರ್ಶನ್

 

ಮಂಗಳೂರು: ಬಿಜೆಪಿ ರಾಜಕೀಯ ಮಾಡಲು ಮಾತ್ರ ಅಯೋಧ್ಯ ವಿಚಾರ ಬೇಕು, ಅವರಿಗೆ ಅಭಿವೃದ್ಧಿ ವಿಚಾರವೇ ಬೇಡ ಎಂದು ಕೆಪಿಸಿಸಿ ಉಪಾಧ್ಯಕ್ಷ, ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ. ಸುದರ್ಶನ್ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವು ಘೋಷಣೆ ಮಾಡಿರುವ ಗ್ಯಾರಂಟಿ ಬಡವರ ಬದುಕಿಗೆ ಆಸರೆ ಆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳ ಜತೆ ಜಿಲ್ಲಾ ಮಟ್ಟದಲ್ಲಿ ಸಮಾವೇಶ ಮಾಡಬೇಕಿದ್ದು, ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಆದಾಗ ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಬಲಗೊಳ್ಳಲಿವೆ. ಬಿಜೆಪಿ ದುರಾಡಳಿತದಿಂದ ನೊಂದ ಜನರು ಬದಲಾವಣೆ ಬಯಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಸರಕಾರ ಘೋಷಣೆ ಮಾಡಿದಂತೆ ಗ್ಯಾರಂಟಿ ಅನುಷ್ಠಾನ ಮಾಡಲಾಗಿದೆ ಎಂದರು.

ಬಿಜೆಪಿ ಸರಕಾರ ಅಧಿಕಾರ ಬಿಟ್ಟು ಇಳಿದಾಗ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಆದರೆ, ಅನುಭವಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಸರಕಾರ ಆಡಳಿತದ ಬಗ್ಗೆ ಗಮನ ಹರಿಸುತ್ತಿದೆ. ಸರಕಾರ ಆಡಳಿತಕ್ಕೆ ಬಂದು ಆರು ತಿಂಗಳಷ್ಟೇ ಆಗಿದ್ದು, ಬಹಳಷ್ಟು ಅಭಿವೃದ್ಧಿ ಕೆಲಸಗಳೂ ಆರಂಭವಾಗಿವೆ ಎಂದರು.

  1.  

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಎಂಬುದು ನಿಂತ ನೀರಲ್ಲ. ಬದಲಾವಣೆ ಜಗದ ನಿಯಮ. ಧಾರ್ಮಿಕ ವಿಚಾರಗಳನ್ನು ನಾವು ಗೌರವಿಸುತ್ತೇವೆ. ಅದರ ಜತೆಗೆ ಜನರ ಬದುಕಿನ ಸಮಸ್ಯೆಗಳು, ಸಂಕಷ್ಟಗಳನ್ನು ಪ್ರಶ್ನಿಸಬೇಕಿದೆ. ಆದರೆ, ಕೇಂದ್ರ ಸರಕಾರದಿಂದ ಇದಕ್ಕೆ ಉತ್ತರ ಸಿಗುತ್ತಿಲ್ಲ. ಸಂಸತ್ತಿನಲ್ಲಿ 150 ಸಂಸದರನ್ನು ಹೊರಗೆ ಹಾಕಿ ಬಿಲ್ ಪಾಸ್ ಮಾಡುವುದೆಂದರೆ ಪ್ರಜಾಪ್ರಭುತ್ವದ ಮೇಲೆ ಎಷ್ಟು ಗೌರವ ಇದೆ ಎಂಬುದನ್ನು ತೋರಿಸುತ್ತದೆ ಎಂದರು.

ಅಯೋಧ್ಯೆಗೆ ಸಂಬಂಧಿಸಿ ರಾಜ್ಯದಲ್ಲಿ ಹಿಂದಿನ ಪ್ರಕರಣಗಳನ್ನು ಕೆದಕಲಾಗುತ್ತಿದೆ ಎಂಬುದಾಗಿ ವಿರೋಧ ಪಕ್ಷದ ನಾಯಕರ ವಿರೋಧದ ಕುರಿತಂತೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಅವರು ಗೃಹ ಸಚಿವರಾಗಿದ್ದಾಗ ಯಾಕೇ ಸುಮ್ಮನಿದ್ದರು. ನ್ಯಾಯಾಲಯದ ತೀರ್ಮಾನವೇ ಅಂತಿಮ. ಎರಡು ಸಲ ಸರಕಾರ ಮಾಡಿದವರಿಗೆ ಈ ಸಂದರ್ಭದಲ್ಲಿ ಇದರ ಬಗ್ಗೆ ಅರಿವಿರಲಿಲ್ಲವೇ? ರಾಜಕಾರಣಕ್ಕೆ ಮಾತ್ರ ಅಯೋಧ್ಯೆ ವಿಚಾರ ಬೇಕು ಅವರಿಗೆ. ಈ ಘಟನೆ ರಾಜಕೀಯವಾಗಿ ನೋಡುವ ಅಗತ್ಯ ಇಲ್ಲ ಎಂದರು.

ಇಬ್ರಾಹಿಂ ಕೋಡಿಜಾಲ್, ನೀರಜ್‌ಪಾಲ್, ಶುಭೋದಯ ಆಳ್ವ, ವಿಶ್ವಾಸ್ ಕುಮಾರ್ ದಾಸ್, ಲಾರೆನ್ಸ್ ಡಿಸೋಜ, ನಝೀರ್ ಬಜಾಲ್ ಇದ್ದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com