Breaking News

ವೆನ್ಲಾಕ್‌ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಕ್ಯಾಥ್ ಲ್ಯಾಬ್: ಡಿಸಿ ಮುಲ್ಲೈ

 

ಮಂಗಳೂರು: ಇಲ್ಲಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಹೃದಯ ರೋಗಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲು ಕ್ಯಾಥ್ ಲ್ಯಾಬ್ ವ್ಯವಸ್ಥೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೆನ್ಲಾಕ್‌ ಆಸ್ಪತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯ ರೋಗಿಗಳು ಬರುತ್ತಿದ್ದು, ಅವರಿಗೆ ಉನ್ನತ ದರ್ಜೆಯ ಚಿಕಿತ್ಸೆಯನ್ನು ನೀಡುವುದು ಅವಶ್ಯಕ ಆಗಿರುತ್ತದೆ. ರೋಗಿಗಳಿಗೆ ಸ್ಟಂಟ್ ಅಳವಡಿಸಲು ಸೇರಿದಂತೆ ಪ್ರಮುಖ ಚಿಕಿತ್ಸೆಗಳಿಗೆ ಕ್ಯಾಥ್ ಲ್ಯಾಗ್ ಅವಶ್ಯ ಆಗಿದೆ. ಆಸ್ಪತ್ರೆ ಆವರಣದಲ್ಲಿ ಇದಕ್ಕಾಗಿ ಸ್ಥಳ ಲಭ್ಯವಿದ್ದು, ಅದಕ್ಕೆ ಸಾಕಷ್ಟು ಸೌಲಭ್ಯ ಅಗತ್ಯವಿದೆ. ಆರೋಗ್ಯ ಸಚಿವರು ಕೂಡಾ ವೆನ್ ಲಾಕ್‍ನಲ್ಲಿ ಕ್ಯಾಥ್ ಲ್ಯಾಬ್ ಸ್ಥಾಪಿಸಲು ಉತ್ಸುಕರಾಗಿದ್ದಾರೆ ಎಂದರು.

ವೆನ್ಲಾಕ್‌ ನಲ್ಲಿ ಕ್ಲಿನಿಕಲ್ ಸೇವೆ ಮಾಡುತ್ತಿರುವ ಕೆ.ಎಂ.ಸಿ ಸಂಸ್ಥೆಯು ಕ್ಯಾಥ್ ಲ್ಯಾಬ್ ಸ್ಥಾಪಿಸಬೇಕು. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಕೆಎಂಸಿ ತಿಳಿಸಿದೆ. ವೆನ್ಲಾಕ್‌ ಆಸ್ಪತ್ರೆಗೆ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಹೊಸ ವೈದ್ಯರು ಸೇವೆಗೆ ಬಂದಿದ್ದಾರೆ. ನ್ಯೂರೋ , ಕಾರ್ಡಿಯಾಕ್ (ಸಿಟಿವಿಎಸ್), ಪ್ಲಾಸ್ಟಿಕ್ , ಕ್ಯಾನ್ಸರ್ , ಮೂತ್ರಪಿಂಡ ಸೇರಿದಂತೆ ಉನ್ನತ ತಜ್ಞ ವೈದ್ಯರು ಆಸ್ಪತ್ರೆಯ ಸೇವೆಯಲ್ಲಿದ್ದಾರೆ ಎಂದು ವೆನ್ಲಾಕ್‌ ಅಧೀಕ್ಷಕಿ ಡಾ. ಜೆಸಿಂತಾ ಹೇಳಿದರು.

  1.  

ನೂತನವಾಗಿ ನಿರ್ಮಿಸಲಾದ ವೆನ್‍ಲಾಕ್ ಹೊಸ ಸರ್ಜಿಕಲ್ ಬ್ಲಾಕ್‍ನ ಸಂಪೂರ್ಣ ಬಳಕೆಗೆ ಅಗತ್ಯವಾಗಿ ಬೇಕಾದ ಎಲ್ಲ ಕಾಮಗಾರಿ ಮತ್ತು ಉಪಕರಣಗಳ ಖರೀದಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಅತಿ ಶೀಘ್ರದಲ್ಲಿ ಬಳಕೆಗೆ ಲಭ್ಯಗೊಳಿಸಬೇಕು. ವೆನ್‍ಲಾಕ್ ಆವರಣದಲ್ಲಿ ಹಾದು ಹೋಗಿರುವ ರೈಲ್ವೆ ಸ್ಟೇಷನ್ ರಸ್ತೆಯನ್ನು ಸಂಚಾರ ನಿರ್ಬಂಧಿಸಿ, ಪರ್ಯಾಯ ರಸ್ತೆ ಅಭಿವೃದ್ಧಿ ಪಡಿಸುವ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಅವರು ಸ್ಮಾಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.

ಹೊಸ ಸರ್ಜಿಕಲ್ ಬ್ಲಾಕ್‍ಗೆ ವೈದ್ಯಕೀಯ ಸಲಕರಣೆ ಮತ್ತು ಯಂತ್ರೋಪಕರಣಗಳನ್ನು ಹೊಸದಾಗಿ ಖರೀದಿಸಿ ಅಳವಡಿಸಲು ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ 6.97 ಕೋಟಿ ಮತ್ತು ಆರೋಗ್ಯ ರಕ್ಷಾ ಸಮಿತಿಯಿಂದ 2 ಕೋಟಿ ವೆಚ್ಚದಲ್ಲಿ ಖರೀದಿಸಲು ಸಭೆ ತೀರ್ಮಾನಿಸಿತ್ತು. ಅಲ್ಲದೆ ಹೊಸ ಬ್ಲಾಕ್‍ಗೆ ರೂಪಾಯಿ 5 ಕೋಟಿ ವೆಚ್ಚದಲ್ಲಿ ಅಗತ್ಯ ವೈದ್ಯಕೀಯ ಸಲಕರಣೆ ನೀಡುವುದಾಗಿ ಕೆಎಂಸಿ ತಿಳಿಸಿದೆ ಎಂದರು.

ವೆನ್‍ಲಾಕ್ ಆಸ್ಪತ್ರೆಯ ಹೊರರೋಗಿ ವಿಭಾಗ ಕಟ್ಟಡದ ಸ್ವಚ್ಛತೆ ಸೇರಿದಂತೆ ಸಂಪೂರ್ಣ ನಿರ್ವಹಣೆಯನ್ನು ಮಾಡಲು ಹಾಗೂ ಆಸ್ಪತ್ರೆಯಲ್ಲಿ ನರ್ಸ್‍ಗಳ ಸಂಖ್ಯೆಯು ಹಂತ ಹಂತವಾಗಿ ಹೆಚ್ಚಿಸಲು ಕೆಎಂಸಿ ಒಪ್ಪಿದೆ ಎಂದರು.
ಜಿಲ್ಲಾ ಪಂಚಾಯತ್ ಸಿಇಒ ಡಾ.ಆನಂದ್ ಕೆ, ಆರೋಗ್ಯ ಇಲಾಖೆ ಅಧಿಕಾರಿ ಡಾ. ರಾಜೇಶ್ ಸೇರಿದಂತೆ ಹಲವರು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com