Breaking News

ಪ್ರಜೆಗಳ ಅಸ್ತ್ರವೇ ಮತದಾನ, ಹಕ್ಕು ಚಲಾವಣೆಯ ಅರಿವು ಅಗತ್ಯ: ಸಿಇಒ ಈಶ್ವರ ಕಾಂದೂ

 

ಕಾರವಾರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಪ್ರಮುಖ ಅಸ್ತ್ರವೇ ಮತದಾನ. ಹೀಗಾಗಿ ನಾವೆಲ್ಲ ಮತದಾನದ ಮಹತ್ವ ಅರಿತು, ನಮ್ಮ ಹಕ್ಕನ್ನು ಚಲಾಯಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಕಾಂದೂ ಹೇಳಿದರು.

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ತಾಲೂಕ ಪಂಚಾಯಿತಿ ಸಿರಸಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಿರಸಿ ವತಿಯಿಂದ ಮಾರಿಕಾಂಬಾ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಸ್ವೀಪ್ ಚಟುವಟಿಕೆಗಳ ಅಡಿ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

  1.  

ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಹಾಗೂ ಮತದಾನದ ಮಹತ್ವದ ಕುರಿತು ತಿಳಿಸಿದ ಅವರು, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ, ಪ್ರತಿ ವರ್ಷ ಭಾರತದಲ್ಲಿ ಜ.25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತದೆ. 1950ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ನೆನಪಿಗಾಗಿ ಆಚರಿಸಲಾಗುತ್ತಿದೆ. 2011 ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಯಿತು ಎಂದು ಚುಟುಕಾಗಿ ರಾಷ್ಟ್ರೀಯ ಮತದಾರರ ದಿನಾಚರಣೆ ಇತಿಹಾಸದ ಕುರಿತು ತಿಳಿಸಿದರು.

ರಾಷ್ಟ್ರೀಯ ಮತದಾರರ ದಿನಾಚರಣೆಯನ್ನ ಆಚರಿಸುವ ಮುಖ್ಯ ಉದ್ದೇಶವೇ ನಾಗರಿಕರಲ್ಲಿ ಮತದಾನದ ಅರಿವು ಮೂಡಿಸುವುದು. ಹೊಸ ಮತದಾರರನ್ನು ಸೆಳೆಯುವುದು, ಉತ್ತೇಜಿಸುವುದು ಮತ್ತು ಮತದಾರರ ಸಂಖ್ಯೆಯನ್ನು ಹೆಚ್ಚಿಸಲು ಆಚರಿಸಲಾಗುತ್ತದೆ. ಹೀಗಾಗಿ ಪ್ರತಿ ವರ್ಷ 18 ವರ್ಷ ವಯಸ್ಸು ಪೂರ್ಣಗೊಂಡವರು ತಪ್ಪದೇ, ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಬೇಕು ಎಂಬ ಸಲಹೆ ನೀಡಿದರು.

ಈ ವೇಳೆ ಸ್ವೀಪ್ ವತಿಯಿಂದ ಶಾಲಾ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಬಂಧ, ರಸಪ್ರಶ್ನೆ ಹಾಗೂ ಭಿತ್ತಿಚಿತ್ರ ಸ್ಪರ್ಧೆ ಆಯೋಜಿಸಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಎಲ್ಲ ಮಕ್ಕಳು ಭಾಗವಹಿಸಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com