Breaking News

ಪೌಷ್ಠಿಕ ಆಹಾರಕ್ಕೆ ಕೊಕ್ಕೆ, ಉ.ಕ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ವಿರುದ್ಧ ಸಿದ್ದಿಗಳ ಮುನಿಸು

 

ಕಾರವಾರ: ಉತ್ತರ ಕನ್ನಡದ‌ ಸಿದ್ದಿ ಜನಾಂಗದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿಶೇಷ ಗಿರಿಜನ ಯೋಜನೆ ಅಡಿ ನೀಡುವ ಪೌಷ್ಠಿಕ ಆಹಾರ ನೀಡುವ ಯೋಜನೆಗೆ ಗ್ರಹಣ ಹಿಡಿದಿದ್ದು, ಆರು ತಿಂಗಳಿಂದ ಆಹಾರ ಪೂರೈಕೆ ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೆನೆತ್ ಸಿದ್ದಿ ಅವರು ಸೋಮವಾರ ಪತ್ರಿಕಾಗೋಷ್ಠಿ ಆರೋಪಿಸಿದರು.

ಪ್ರತಿ ಆರು ತಿಂಗಳ ಕಾಲ ಗಿರಿಜನರಿಗೆ ಪೌಷ್ಠಿಕ ಆಹಾರ ನೀಡುವ ಯೋಜನೆ ಸಮಾಜ ಕಲ್ಯಾಣ ಇಲಾಖೆಯಿಂದ ಆರಂಭಿಸಲಾಗಿತ್ತು. ಜೂನ್ ನಿಂದ ಡಿಸೆಂಬರ್ ತನಕ ಪ್ರತಿ ತಿಂಗಳು ಜಿಲ್ಲೆಯ ಆರು ಸಾವಿರ ಸಿದ್ದಿ ಬುಡಕಟ್ಟು ಜನಾಂಗಕ್ಕೆ ಆಹಾರ ತಲುಪುತ್ತಿತ್ತು. ಆದರೆ, 2023 ಜೂನ್ ನಿಂದ ಪೌಷ್ಠಿಕ ಆಹಾರ ಪೂರೈಕೆ ನಿಂತಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆಹಾರ ಸರಬರಾಜು ಮಾಡಲು ಟೆಂಡರ್ ಆಗಿಯೇ ಇಲ್ಲ ಎನ್ನುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ಸಮಸ್ಯೆ ಉಂಟಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಗಿರಿಜನ ಯೋಜನೆ ಅಡಿ 6 ಸಾವಿರ ಸಿದ್ದಿ ಕುಟುಂಬಕ್ಕೆ 8 ಕೆಜಿ ಅಕ್ಕಿ, 30 ಮೊಟ್ಟೆ, 6 ಕೆಜಿ ಬೇಳೆ ಕಾಳು,‌ ಒಂದು ಲೀಟರ್ ಅಡುಗೆ ಎಣ್ಣೆ, ಅರ್ಧ ಕೆ.ಜಿ. ತುಪ್ಪ ವಿತರಣೆ ಮಾಡಲಾಗುತ್ತಿತ್ತು. ಈ ಬಾರಿ ಟೆಂಡರ್ ಆಗಿಲ್ಲ ಎಂಬ ನೆಪವನ್ನು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ‌ಇದರಿಂದ ಬುಡಕಟ್ಟು ಜನಾಂಗಕ್ಕೆ ತೊಂದರೆ ಆಗಿದೆ‌. ಈ ಕುರಿತು ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿಗೆ ಮನವಿ ನೀಡಿದ್ದೇವೆ ಎಂದರು.

ಈ ಸಮಸ್ಯೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಿಗಳು ಎಸ್ ಟಿ ಸಮುದಾಯಕ್ಕೆ ಸೇರಿದ್ದಾರೆ. ಗಿರಿಜನ ಪೌಷ್ಟಿಕ ಆಹಾರ ಸೌಲಭ್ಯದ ಯೋಜನೆ ಬೆಳಗಾವಿ, ಧಾರವಾಡ ಜಿಲ್ಲೆಯ ಸಿದ್ದಿ ಕುಟುಂಬಕ್ಕೆ ಸಿಗುತ್ತಿಲ್ಲ ಎಂದರು.

  1.  

ಪೌಷ್ಠಿಕ ಆಹಾರ ಬಾರದೇ ಆರು ತಿಂಗಳು ಕಳೆದು ಹೋಗಿದೆ. ಈ ಬಾರಿ ಮಳೆ ಸರಿಯಾಗಿ ಬಂದಿಲ್ಲ. ಕಾಡಿನ ವಾಸಿಗಳಾದ ನಮಗೆ ಕೂಲಿ ಸಹ ಇಲ್ಲ. ಮಳೆಗಾಲದಲ್ಲಿ ಪೌಷ್ಟಿಕ ಆಹಾರದ ಅವಶ್ಯಕತೆ ಇದೆ. ಈ ಸಲ ನಮ್ಮ ಬುಡಕಟ್ಟು ಜನರು ಉಪವಾಸ ಇರಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಪೌಷ್ಠಿಕ ಆಹಾರ ಪೂರೈಕೆ ಮಾಡದೇ ಇದ್ದಲ್ಲಿ ಡಿಸೆಂಬರ್ ನಲ್ಲಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಿದ್ದಿ ಸಮುದಾಯದ ಗೌರವ ಅಧ್ಯಕ್ಷ ಜಾನ್ ಕೆ. ಸಿದ್ದಿ ತಿಳಿಸಿದರು.

ಕಾಡಿನಲ್ಲಿನ ಸಿದ್ದಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಪೌಷ್ಟಿಕ ಆಹಾರ ನೀಡುವ ಯೋಜನೆ 13 ವರ್ಷದಿಂದ ನಡಿಯುತ್ತಿದೆ. ಕಾಡಿನ ಕಿರು ಉತ್ಪನ್ನ ಸಂಗ್ರಹಿಸಿ,‌ ಮಾರಾಟ ಮಾಡಿ ಬದುಕುತ್ತೇವೆ. ಈಗ ಕಾಡಿನ ಉತ್ಪನ್ನಔು ಸಿಗುತ್ತಿಲ್ಲ. ಇದೇ ಮೊದಲ ಬಾರಿಗೆ ಇಂತಹ ಸಮಸ್ಯೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಥೆರೇಜಾ, ಫಾತಿಮಾ, ಬಸ್ಯ್ಯಾವ್ ಸಿದ್ದಿ ಸೇರಿದಂತೆ ಹಲವರು ಇದ್ದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com