
ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ ಬುಧವಾರ (19ಕ್ಕೆ) ಚಾಲನೆ ಸಿಗಲಿದೆ. ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಯಾವುದೇ ದಲ್ಲಾಳಿಗಳ ಆಮಿಷಕ್ಕೆ ಒಳಗಾಗದೇ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಂಗಳವಾರ ಟ್ವಿಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಯೋಜನೆ ಲಾಭ ಪಡೆಯಲು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಕೇಂದ್ರಗಳಲ್ಲಿ ಉಚಿತವಾಗಿ ಹೆಸರು ನೋಂದಣಿ ಮಾಡಿಕೊಳ್ಳಬಹುದು ಅಥವಾ ಸ್ವಯಂಸೇವಕ ಪ್ರಜಾಪ್ರತಿನಿಧಿಗಳು ಮನೆ ಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಡಿತರ ಕಾರ್ಡ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ನೋಂದಣಿಗೆ ಅಗತ್ಯ. ಪತಿಯ ಆಧಾರ್ ಸಂಖ್ಯೆ ಕೂಡ ಕಡ್ಡಾಯ. ಆಧಾರ್ ಜತೆಗೆ ಮೊಬೈಲ್ ಕೊಂಡೊಯ್ದರೆ ಸಾಕು ಎಂದು ತಿಳಿಸಿದ್ದಾರೆ.
ಯೋಜನೆಯ ಉಚಿತ ಲಾಭ ಪಡೆಯಲು ಸಹಾಯವಾಣಿ 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆ ಮೇಸೆಜ್ ಕಳುಹಿಸಿ. ಕೂಡಲೇ ನಿಮಗೆ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯಗಳ ಮಾಹಿತಿ ಬರುತ್ತದೆ. ಏನಾದರೂ ಗೊಂದಲ ಇದ್ದರೆ ಇಲಾಖೆಯ ಸಹಾಯವಾಣಿ 1902 ನಂಬರ್ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.


