Breaking News

ಜಲಜೀವನ್ ಮಿಷನ್ ಯೋಜನೆ ವಿಳಂಬ ಸಹಿಸಲ್ಲ: ಡಾ. ಆನಂದ್‌ ಎಚ್ಚರಿಕೆ

 

ಮಂಗಳೂರು: ಜಿಲ್ಲೆಯ ಗ್ರಾಮೀಣ ಪ್ರದೇಶದ ಮನೆಗಳಿಗೆ 24 ಗಂಟೆಯೂ ಕುಡಿವ ನೀರು ಪೂರೈಕೆಯ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್‍ನ ಕಾಮಗಾರಿಗಳಲ್ಲಿ ವಿಳಂಬಕ್ಕೆ ಆಸ್ಪದ ನೀಡಬಾರದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್‍ನ ಮಿನಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕುಡಿವ ನೀರು ಮತ್ತು ನೈರ್ಮಲ್ಯ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಳೆಗಾಲ ನಿರೀಕ್ಷಿತ. ಅದನ್ನೇ ಕಾರಣ ಇಟ್ಟುಕೊಂಡು ಜಲಜೀವನ್ ಮಿಷನ್ ಕಾಮಗಾರಿಗಳು ವಿಳಂಬವಾಗುತ್ತಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ, ಅದೆಲ್ಲವನ್ನ ಪರಿಗಣಿಸಿಯೇ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗಿರುತ್ತದೆ, ಆದ ಕಾರಣ ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

36 ಕಾಮಗಾರಿಗಳು ವಿವಿಧ ಕಾರಣಗಳಿಂದ ನಿಗದಿತ ಅವಧಿಗಿಂತ ವಿಳಂಬವಾಗಿವೆ. ಟೆಂಡರ್ ಷರತ್ತಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಾದ ಎಲ್ಲ ತಾಂತ್ರಿಕ, ಹವಾಮಾನ ಸಹಿತ ಎಲ್ಲ ಅಂಶಗಳನ್ನು ಪರಿಗಣಿಸಿ ಕಾಲಾವಕಾಶ ನೀಡಲಾಗಿರುತ್ತದೆ. ಆದ್ದರಿಂದ ಕಾಮಗಾರಿ ವಿಳಂಬಕ್ಕೆ ಸಬೂಬು ಹೇಳುವಂತಿಲ್ಲ ಎಂದರು.

  1.  

ವಿಳಂಬಗೊಂಡ ಪ್ರತಿಯೊಂದು ಕಾಮಗಾರಿಗಳಿಗೆ ಕಾರಣಗಳನ್ನು ಲಿಖಿತವಾಗಿ ತಿಳಿಸಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 3,34,185 ಮನೆಗಳಿಗೆ ನೀರಿನ ಸಂಪರ್ಕ ಒದಗಿಸಬೇಕಾಗಿದೆ. ಇದರಲ್ಲಿ ಈಗಾಗಲೇ 2,90,583 ಮನೆಗಳಿಗೆ ನೀರು ಪೂರೈಕೆ ಕಾರ್ಯ ಮಾಡಲಾಗುತ್ತಿದೆ. ಉಳಿದ 43,602 ಮನೆಗಳಿಗೆ ನೀರು ಸಂಪರ್ಕ ಕಾರ್ಯ ವಿವಿಧ ಹಂತಗಳಲ್ಲಿ ಬಾಕಿ ಉಳಿದಿವೆ ಎಂದರು.

ಸ್ವಚ್ಛ ಭಾರತ್ ಮಿಷನ್‍ನ ಗೋಬರ್ ಧನ್ ಯೋಜನೆಯಡಿ ಬೆಳ್ತಂಗಡಿ ಹಾಗೂ ಕಡಬ ತಾಲೂಕಿನಲ್ಲಿ ಎರಡು ಘಟಕಗಳು ನಿರ್ಮಾಣವಾಗಿದ್ದು, ಪುತ್ತೂರಿನ ಬಡಗನ್ನೂರು ಗ್ರಾಮ ಪಂಚಾಯತ್‍ನಲ್ಲಿ ನಿರ್ಮಿಸಲುದ್ದೇಶಿಸಿರುವ ಗೋಬರ್‍ಧನ ಅನುಷ್ಠಾನಕ್ಕೆ 11.93 ಲಕ್ಷ ರೂ. ಡಿಪಿಆರ್ (ಸಮಗ್ರ ಯೋಜನೆ ವರದಿ) ಮತ್ತು ಅಂದಾಜುಪಟ್ಟಿ ತಯಾರಿಸಲಾಗಿದ್ದು, ಅನುಮೋದನೆ ನೀಡಬೇಕಾಗಿದೆ ಎಂದು ಯೋಜನೆಯ ಅಧಿಕಾರಿ ನವೀನ್ ಸಭೆಯಲ್ಲಿ ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಇದ್ದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com