Breaking News

ಗಂಗೂಬಾಯಿ ಹಾನಗಲ್‌ ವಿವಿ, ರಾಜ್ಯವ್ಯಾಪ್ತಿ ಕೋರ್ಸ್ ಆರಂಭ: ನಾಗೇಶ್ ಬೆಟ್ಟಕೋಟೆ

 

ಮಂಗಳೂರು: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಐತಿಹಾಸಿಕ ಚಟುವಟಿಕೆಗಳಿಗೆ ನಾಂದಿ ಹಾಡಿದೆ. ಕೇಂದ್ರ ಸ್ಥಾನ ಮೈಸೂರಿನಲ್ಲಿ ನಡೆಸುತ್ತಿದ್ದ ಕೋರ್ಸ್‍ಗಳನ್ನು ರಾಜ್ಯವ್ಯಾಪಿ ನಡೆಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ ಎಂದು  ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿ ಉಪಕುಲಪತಿ ನಾಗೇಶ್ ವಿ. ಬೆಟ್ಟಕೋಟೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವವಿದ್ಯಾಲಯದೊಡನೆ ರಾಜ್ಯದ ಯಾವುದೇ ನೋಂದಾಯಿತ ಶಿಕ್ಷಣ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡು ಸಂಗೀತ, ನೃತ್ಯ ಮತ್ತು ಮತ್ತು ಪ್ರದರ್ಶಕ ಕಲೆಗಳ ಕೋರ್ಸ್ ನಡೆಸಲು ಅನುವಾಗುವ ಪರಿನಿಯಮಗಳಿಗೆ ರಾಜ್ಯಪಾಲರ ಅಂಕಿತ ಸಿಕ್ಕಿದೆ. ಈಗಾಗಲೇ ರಾಜ್ಯದ ಏಳು ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯದ ಜತೆಗೆ ಒಡಂಬಡಿಕೆ ಮಾಡಿಕೊಂಡು ಕೋರ್ಸುಗಳನ್ನು ನಡೆಸಲು ಪ್ರಾರಂಭಿಸಿದೆ ಎಂದರು.

ಅಂತರ ರಾಷ್ಟ್ರೀಯ, ವಯೋಲಿನ್ ವಾದಕರು, ಪದ್ಮ ಭೂಷಣ ಪ್ರಶಸ್ತಿ ಪ್ರರಸ್ಕೃತರು ಆದ ಡಾ. ಎಲ್. ಸುಬ್ರಹ್ಮಣ್ಮಂ ಅವರು ತಮ್ಮ ಗ್ಲೋಬಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥೆಯಲ್ಲಿ ಸಂಗೀತ ಕೋರ್ಸುಗಳನ್ನು ಹಾಗೂ ಹಸರಾಂತ ನೃತ್ಯ ಕಲಾವಿದೆ ಡಾ. ಅನುರಾಧ ವಿಕ್ರಾಂತ್ ಅವರು ತಮ್ಮ ದೃಷ್ಟಿ ಆರ್ಟ್ ಸೆಂಟರ್‌ ನಲ್ಲಿ ನೃತ್ಯಕ್ಕೆ ಸಂಬಂಧಿಸಿದ ಕೋರ್ಸುಗಳನ್ನು ಹಾಗೂ ಬೆಂಗಳೂರಿನ ಎಂ.ಇ.ಎಸ್ ಶಿಕ್ಷಣ ಸಂಸ್ಥೆ ಮತ್ತು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳು ನಾಟಕದ ಕೋರ್ಸುಗಳನ್ನು ನಡೆಸಲು ಒಡಂಬಡಿಕೆ ಮಾಡಿಕೊಂಡಿರುತ್ತವೆ. ರಾಜ್ಯ ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆಯಾದ ಕರ್ನಾಟಕ ಜಾನಪದ ಪರಿಷತ್ತು ಕೂಡ ಜಾನಪದ ಕಲೆಗಳಲ್ಲಿ, ಕೋರ್ಸುಗಳನ್ನು ನಡೆಸಲು ಒಡಂಬಡಿಕೆ ಮಾಡಿಕೊಳ್ಳುತ್ತಿದೆ. ಇನ್ನೂ ಹತ್ತಾರು ಶಿಕ್ಷಣ ಸಂಸ್ಥೆಗಳು ಸಂಗೀತ ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕೋರ್ಸುಗಳನ್ನು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಸಲು ಅರ್ಜಿಗಳನ್ನು ಸಲ್ಲಿಸಿದ್ದು 2023-24ನೇ ಶೈಕ್ಷಣಿಕ ಸಾಲಿನಿಂದಲೇ ಈ ಸಂಸ್ಥೆಗಳಿಗೆ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.

  1.  

ಸರ್ಕಾರವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ನಡೆಸುತ್ತಿದ್ದ ಸಂಗೀತ ಪರೀಕ್ಷೆ ಹಾಗೂ ಪ್ರದರ್ಶಕ ಕಲೆಗಳ ನೃತ್ಯ ಮತ್ತು ತಾಳ ವಾದ್ಯಗಳಲ್ಲಿ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳನ್ನು ನಡೆಸುವ ಮತ್ತು ಪ್ರಮಾಣ ಪತ್ರಗಳನ್ನು ನೀಡುವ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ವಹಿಸಿಕೊಟ್ಟಿದೆ. ಪಠ್ಯ ಕ್ರಮಗಳಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ಆಧುನಿಕ ತಾಂತ್ರಿಕತೆಯನ್ನು ಸದ್ಬಳಕೆ ಮಾಡಿಕೊಂಡು ಪಾರದರ್ಶಕತೆಯಿಂದ ಈ ಪರೀಕ್ಷೆಗಳನ್ನು ವಿಶ್ವವಿದ್ಯಾಲಯದಲ್ಲಿ ನಡೆಸಲು ಸಿದ್ಧತೆ ಮಾಡಲಾಗುತ್ತಿದೆ ಎಂದ ಅವರು ಮೊದಲ ಪರೀಕ್ಷೆ ಬರುವ ನವೆಂಬರ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಕರಾವಳಿ ನೃತ್ಯ ಪರಿಷತ್‍ನ ಉಪಾಧ್ಯಕ್ಷ ರಾಜಶ್ರೀ ಇದ್ದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com