Breaking News

ಗಾಂಜಾ, ಡ್ರಗ್ಸ್, ಮಾಫಿಯಾ ಮಟ್ಟ ಹಾಕಲು ಕ್ರಮ: ಕಮಿಷನರ್ ಜೈನ್

 

ಉಳ್ಳಾಲ: ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್  ಕುಮಾರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಪರಿಹಾರ ಸಭೆ ಉಳ್ಳಾಲದಲ್ಲಿ ಶನಿವಾರ ನಡೆಯಿತು.

ಡ್ರಗ್ ಸಮಸ್ಯೆ ಬೆಳೆಯುತ್ತಿದೆ. ನಂಬರ್ ಪ್ಲೇಟ್ ಇಲ್ಲದ ವಾಹನಗಳಲ್ಲಿ ತಲಪಾಡಿಗೆ ರಾತ್ರಿ ವೇಳೆ ಸಾಗಣೆ ಆಗುತ್ತಿದೆ. ಅದಕ್ಕೊಂದು ನಿಗೂಢ ಜಾಗ ತಲಪಾಡಿಯಲ್ಲಿದೆ. ಇದನ್ನು ಮಟ್ಟ ಹಾಕುವ ಕೆಲಸ ಆಗಬೇಕು ಎಂದು ಸಭೆಯಲ್ಲಿ ಜನರು ಆಗ್ರಹಿಸಿದರು.

ತೊಕ್ಕೊಟ್ಟುವಿನಲ್ಲಿ ಸಂಚಾರ ಪೊಲೀಸರು ಹೆಲ್ಮೇಟ್ ಪ್ರಕರಣ ಮಾತ್ರ ಹಾಕುತ್ತಿದ್ದಾರೆ. ಸುಗಮ ಸಂಚಾರ ವ್ಯವಸ್ಥೆಗೆ ಅವಕಾಶ ಆಗುತ್ತಿಲ್ಲ. ಮಾದಕ ವಸ್ತು ಜಾಲ ಜಾಸ್ತಿ ಆಗುತ್ತಿದೆ. ಅದೇ ರೀತಿ ಗಾಂಜಾ ಹಾವಳಿ ಇದೆ. ಈ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮೆಡಿಕಲ್ ಕಾಲೇಜು ಕಾರ್ಯಾಚರಣೆ ಮಾಡುತ್ತಿವೆ.  ಇಲ್ಲಿಗೆ ಹೊರಗಿನ ವಿದ್ಯಾರ್ಥಿಗಳು ಬರುತ್ತಾರೆ. ಅವರಲ್ಲಿಯೇ ಕೆಲವರು ಡ್ರಗ್ ಜಾಲದಲ್ಲಿ ತೊಡಗುತ್ತಾರೆ. ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ರಾಜೇಶ್ ಉಚ್ಚಿಲ, ಯಶವಂತ ಅಮೀನ್, ಶೇಖರ್ ಕನೀರ್ ತೋಟ , ಕೌನ್ಸಿಲರ್ ಮುಹಮ್ಮದ್ ಮುಕಚೇರಿ, ಮುಸ್ತಫಾ ಉಳ್ಳಾಲ ಪ್ರಮೋದ್ ಕುಮಾರ್ , ಝಾಕೀರ್,ಆಸೀಫ್ ಸೇರಿದಂತೆ ಹಲವರು ಸಮಸ್ಯೆಗಳನ್ನು ಪೊಲೀಸ್ ಕಮಿಷನರ್ ಎದುರು ಮಂಡಿಸಿದರು.

  1.  

ಸಾರ್ವಜನಿಕರ ದೂರು, ಅಭಿಪ್ರಾಯ, ಬೇಡಿಕೆ ಆಲಿಸಿದ ಬಳಿಕ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಾತನಾಡಿ, ಸಭೆಯಲ್ಲಿ ಸ್ಥಳೀಯರು ಪ್ರಸ್ತಾಪಿಸಿದ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಗಮನ ಹರಿಸಲಾಗುವುದು. ದಾರಿದೀಪ, ತ್ಯಾಜ್ಯ ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು. ಕೋಟೆಕಾರ್, ಕೊಲ್ಯ, ಬೀರಿ, ತಲಪಾಡಿ ಮುಂತಾದ ಕಡೆಗಳಲ್ಲಿ ಇರುವ ಸಂಚಾರ ಸಮಸ್ಯೆಗಳಿಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಕಾನೂನು ಉಲ್ಲಂಘಿಸಿ ನಡೆಸುವ ಸಂಚಾರಕ್ಕೆ ಶಿಕ್ಷೆ ಖಚಿತ. ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಟ್ರಾಫಿಕ್ ನಿಯಂತ್ರಣ ಮಾಡಲು ನಾಲ್ಕು ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಪ್ರತಿ ಠಾಣೆಗೆ ಎರಡು ಜೀಪು ಮತ್ತು ಬೈಕ್ ನೀಡಲಾಗಿದೆ. ಗಾಂಜಾ, ಡ್ರಗ್ ಮಾಫಿಯಾ ಮುಂತಾದವುಗಳನ್ನು ಹತ್ತಿಕ್ಕಲು ಒಂದು ತಂಡ ಕೆಲಸ ಮಾಡುತ್ತಿದೆ. ಪ್ರಕರಣ ದುರುದ್ದೇಶ ಪೂರಿತವಾಗಿ ಯಾರ ಮೇಲೂ ಹಾಕಲು ಆಗಲ್ಲ, ಇದಕ್ಕೆ ಅವಕಾಶ ಇಲ್ಲ. ಒಂದು ವೇಳೆ ಈ ರೀತಿ ಆಗಿದೆ ಎಂದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಜೆ ಶಾಲೆ ಬಿಡುವ ವೇಳೆ ಸಂಚಾರ ನಿಯಂತ್ರಣ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದರು.

ಎಸಿಪಿ ಧನ್ಯಾ ನಾಯಕ್ ಮಾತನಾಡಿ, ಸಮಸ್ಯೆ ಗಳಿಗೆ ಪರಿಹಾರ ಠಾಣೆಯಲ್ಲೇ ಸಿಗುತ್ತವೆ. ಒಂದು ವೇಳೆ ಅನ್ಯಾಯ ಆಗಿದೆ ಎಂದು ಕಂಡು ಬಂದಲ್ಲಿ ನನ್ನನ್ನು ಸಂಪರ್ಕಿಸಬಹುದು ಎಂದರು.

ಇನ್ ಸ್ಪೆಕ್ಟರ್ ಸಂದೀಪ್ ಸ್ವಾಗತಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com