Breaking News

ಯೋಗ ದಿನ ಅಚ್ಚುಕಟ್ಟಾಗಿ ಸಂಘಟಿಸಲು ಡಿಸಿ ರವಿಕುಮಾರ್ ಸಲಹೆ

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೇ 21 ರಂದು ಹಮ್ಮಿಕೊಳ್ಳಲಾಗಿರುವ ಅಂತರ ರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಶಿಸ್ತು ಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ಸಂಘಟಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ, ಜಿಲ್ಲಾಡಳಿತ, ಆಯುಷ್ಯ ಇಲಾಖೆ, ಆಯುಷ್  ಕಾಲೇಜುಗಳು, ವಿವಿಧ ಇಲಾಖೆಗಳು, ವಿವಿಧ ಯೋಗ ಸಂಘಟನೆಗಳ ಸಹಯೋಗದೊಂದಿಗೆ ಅಂತರ ರಾಷ್ಟ್ರೀಯ ಯೋಗ ದಿನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಅದರ ಮುಖ್ಯ ಕಾರ್ಯಕ್ರಮ ಮಂಗಳೂರಿನ ಪುರಭವನದ ಮಿನಿ ಸಭಾಂಗಣದಲ್ಲಿ ಬೆಳಿಗ್ಗೆ 8 ಗಂಟೆಗೆ ನಡೆಯಲಿದ್ದು, ಶಿಷ್ಟಾಚಾರದಂತೆ ವಿಧಾನಸಭೆ ಸಭಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕು ಎಂದರು.

ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಕುಡಿಯುವ ನೀರು ಪೂರೈಕೆ, ಶೌಚಾಲಯ, ಪೊಲೀಸ್ ಬಂದೋಬಸ್ತ್ ಹಾಗೂ ಭಾಗವಹಿಸುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆ ಮಾಡಿಕೊಳ್ಳಬೇಕು, ನಗರದಲ್ಲಿ ಮುಖ್ಯ ಕಾರ್ಯಕ್ರಮ ನಡೆಯುವ ಮಿನಿ ಸಭಾಂಗಣದಲ್ಲಿ ಈ ಸ್ಪಚ್ಚತಾ ಕಾರ್ಯ, ಕುಡಿಯುವ ನೀರು ಪೂರೈಕೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಮಂಗಳೂರು ಮಹಾನಗರ ಪಾಲಿಕೆ ನಿರ್ವಹಸಬೇಕೆಂದು ಅವರು ತಿಳಿಸಿದರು.

ಯೋಗ ಪ್ರದರ್ಶನ ಉತ್ತಮವಾಗಿ ಮೂಡಿಬರಲು ಅನುಕೂಲವಾಗುವಂತೆ ಪೂರ್ವಭಾವಿಯಾಗಿ ತಾಲೀಮು ನಡೆಸಬೇಕು.  ಯೋಗಕ್ಕೆ ಅಗತ್ಯ ಇರುವ ಮ್ಯಾಟ್ ಹಾಗೂ ಇತರೆ ಪರಿಕರಗಳನ್ನು ಸಜ್ಜುಗೊಳಿಸಿಕೊಳ್ಳಬೇಕು ಎಂದರು.

  1.  

ಯೋಗ ದಿನಾಚರಣೆಗೆ ಅಗತ್ಯ ಇರುವ ಶಾಲಾ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು, ಎನ್‍ಎಸ್‍ಎಸ್ ಸಂಯೋಜಕರು, ವೆಲ್‍ನೆಸ್ ಸೆಂಟರ್ ಗಳ  ಯೋಗ ಪಟುಗಳನ್ನು ಆಹ್ವಾನಿಸಬೇಕು, ಮುಖ್ಯ ಕಾರ್ಯಕ್ರಮ ನಡೆಯುವ ಮಿನಿಹಾಲಿನಲ್ಲಿ ಅಗತ್ಯ ಸಂಖ್ಯೆಯ ಯೋಗಪಟುಗಳನ್ನು ಮಾತ್ರ ಆಹ್ವಾನಿಸಬೇಕು, ಪ್ರತಿ ವರ್ಷದಂತೆ ಗೋಪಾಲಕೃಷ್ಣ ದೇಲಂಪಾಡಿ ಅವರ ಸಾರಥ್ಯದಲ್ಲಿ ಯೋಗ ದಿನಾಚರಣೆಯನ್ನು ಕೈಗೊಳ್ಳುವಂತೆ ಅವರು ತಿಳಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಇಕ್ಬಾಲ್ ಅವರು ಮಾತನಾಡಿ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ, ಜಿಲ್ಲೆಯ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯ, ಯೋಗ ಸಂಘಟನೆಗಳು ಈ ಕಾರ್ಯಕ್ರಮದ ಯಶಸ್ವಿಗೆ ಪೂರ್ವ ತಯಾರಿ ನಡೆಸುತ್ತಿದ್ದು, ಜಿಲ್ಲೆಯಾದ್ಯಂತ ಸುಮಾರು ಒಂದು ಲಕ್ಷ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಯುಷ ಇಲಾಖೆಯ ಅಧೀನದ ಎಲ್ಲಾ ಕ್ಷೇಮ ಕೇಂದ್ರಗಳಲ್ಲಿ ಒಂದು ತಿಂಗಳಿನಿಂದ ಸಾರ್ವಜನಿಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ಈ ವರ್ಷದ ಧ್ಯೇಯ ವಾಕ್ಯ ಯೋಗ ಫಾರ್ ವಸುದೈವ ಕುಟುಂಬಕಂ ಪ್ರತಿ ಅಂಗಳದಲ್ಲಿ ಯೋಗ ಎಂಬಂತೆ ಜಿಲ್ಲೆಯ ಪ್ರತಿ ಮನೆಗೂ ಯೋಗದ ಪ್ರಯೋಜನವನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಇದ್ದರು.

ಜಿಲ್ಲೆಯ ವಿವಿಧ ಯೋಗ ಸಂಘಟನೆಗಳ ಪ್ರಮುಖರು, ಯೋಗಾಸಕ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com