Breaking News

ಬಾಲ ಕಾರ್ಮಿಕ ಪದ್ದತಿ ತೊಡೆದು ಹಾಕೋಣ: ನ್ಯಾಯಾಧೀಶ ಜೋಶಿ ಕರೆ

 

ಮಂಗಳೂರು: ಬಾಲಕಾರ್ಮಿಕ ಪದ್ಧತಿ ತಳಮಟ್ಟದಿಂದ ತೊಡೆದು ಹಾಕಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಯತ್ನಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಪೊಲೀಸ್ ಇಲಾಖೆ, ಮಂಗಳೂರು ವಕೀಲರ ಸಂಘ ಹಾಗೂ ಜಿಲ್ಲೆಯ ಮಕ್ಕಳ ಸಹಾಯವಾಣಿ ಮತ್ತು ಸಂಬಂಧಿತ ಇಲಾಖೆಗಳ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶೋಭಾ ಬಿ.ಜಿ. ಅವರು ಮಾತನಾಡಿ, ಮಕ್ಕಳ ರಕ್ಷಣೆಗೆ ಸರ್ಕಾರ ಹಲವು ಕಾನೂನು ಹಾಗೂ ಯೋಜನೆಗಳನ್ನು ಜಾರಿಗೊಳಿಸಿದೆ. ಆದಾಗ್ಯೂ ಪೋಷಕರಿಲ್ಲದ ಮಕ್ಕಳು ಅಥವಾ ಬಡತನದಿಂದಾಗಿ ಹೋಟೆಲ್, ಅಂಗಡಿಗಳು, ಗ್ಯಾರೇಜ್, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಬಾಲ ಕಾರ್ಮಿಕರು ಕಂಡು ಬಂದರೆ ಅವರ ಮಾಹಿತಿಯನ್ನು ಕಾರ್ಮಿಕ ಇಲಾಖೆಗೆ ನೀಡಿ. ಈ ಮಕ್ಕಳ ಪೋಷಣೆ ಹಾಗೂ ಶಿಕ್ಷಣ ಪಡೆಯಲು ಪ್ರಜ್ಞಾವಂತ ನಾಗರೀಕರು ಸಹಕರಿಸಬೇಕು ಎಂದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೆನ್ನಿ ಡಿಸೋಜಾ ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಹಕ್ಕು. ಶಾಲೆಯಿಂದ ಹೊರಗುಳಿದ ಮಕ್ಕಳು ಕಂಡುಬಂದರೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.

  1.  

ಬಾಲಕಾರ್ಮಿಕ ಕಾಯ್ದೆಯ ಬಗ್ಗೆ ಹಿರಿಯ ವಕೀಲ ಕೆ. ನಿಕೇಶ್ ಶೆಟ್ಟಿ ಉಪನ್ಯಾಸ ನೀಡಿದರು. ಬಾಲಕಾರ್ಮಿಕರ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳಿಗಾಗಿ ದುಡಿದ ಪ್ರೊ. ಹಿಲ್ದಾ ರಾಯಪ್ಪನ್ ಮತ್ತು ರೆನ್ನಿ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ಬಾಲ ಕಾರ್ಮಿಕ ವಿರೋಧಿ ದಿನ ಕುರಿತ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತ ಬಿಜೈ ಚಿಣ್ಣರ ತಂಗುಧಾಮ, ಬೊಂದೇಲ್ ಬಾಲಕರ ಬಾಲಮಂದಿರ ಹಾಗೂ ಮೂಡುಬಿದಿರೆ ಪ್ರಜ್ಞಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್ ಬಿ.ಈ ಪ್ರಾಸ್ತಾವಿಕ ಮಾತನಾಡಿದರು. ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜೆಬತ್ ತಾವ್ರೂ  ಸ್ವಾಗತಿಸಿದರು. ಹಿರಿಯ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್ ವಂದಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪಾಪ ಭೋವಿ, ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆ ಉಪ ನಿರ್ದೇಶಕ ರಾಜೇಶ್ ಮಿಶ್ರಿಕೋಟೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಶ್ರೀನಿವಾಸ್ ಮತ್ತು ಸಿಬ್ಬಂದಿ, ಇಲಾಖೆ ಎಲ್ಲಾ ಹಿರಿಯ ಕಾರ್ಮಿಕ ನಿರೀಕ್ಷಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸ್ತ್ರೀಶಕ್ತಿ ಮತ್ತು ಸ್ವಸಹಾಯ ಗುಂಪಿನ ಸದಸ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮೊದಲು ಉರ್ವಸ್ಟೋರ್ ವೃತ್ತದಿಂದ ಆಯೋಜಿಸಲಾಗಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಚಾಲನೆ ನೀಡಿದರು.

  1.  

Leave a Reply

Your email address will not be published. Required fields are marked *