Breaking News

ಮೂಲಗೇಣಿದಾರರ ಪರ ತೀರ್ಪು, 18 ಕ್ಕೆ ಮಹತ್ವದ ಸಭೆ: ಮ್ಯಾಕ್ಸಿಂ ಡಿಸಿಲ್ವಾ

 

ಮಂಗಳೂರು: ಹೈಕೋರ್ಟ್ ಮೂಲಗೇಣಿದಾರರ ಪರ ತೀರ್ಪು ನೀಡಿದ್ದು, ನಮ್ಮ ಸುದೀರ್ಘ ಹೋರಾಟಕ್ಕೆ ಬಲ ಸಿಕ್ಕಿದೆ ಎಂದು ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಅಧ್ಯಕ್ಷ ಮ್ಯಾಕ್ಸಿಂ ಡಿಸಿಲ್ವಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೈಕೋರ್ಟ್ ಮೂಲಗೇಣಿದಾರರ ಪರವಾಗಿ ಮೇ 22 ರಂದು ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ವಿಷಯಗಳ ಕುರಿತಂತೆ ಚರ್ಚಿಸಲು ಇದೇ 18 ರಂದು ಬೆಳಿಗ್ಗೆ 9. 30 ಕ್ಕೆ ನಗರದ ಡಾನ್ ಬಾಸ್ಕೋ ಸಭಾಂಗಣದಲ್ಲಿ ಮೂಲ ಗೇಣಿದಾರರ ಮಹತ್ವದ ಸಭೆ ಕರೆಯಲಾಗಿದೆ. ಈ ವಿಶೇಷ ಮಹಾಸಭೆಯಲ್ಲಿ ವಕೀಲರು ಹಾಗೂ ಜನ ಪ್ರತಿನಿಧಿಗಳು ಕೂಡ ಭಾಗವಹಿಸಿ ಮಾಹಿತಿ ನೀಡಲಿದ್ದು, ಮೂಲಗೇಣಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

  1.  

ರಾಜ್ಯ ಸರಕಾರ 2011ರಲ್ಲಿ ಹೊರಡಿಸಿದ ಆದೇಶದ ವಿರುದ್ಧ ಕೆಲವರು ಹೈಕೋರ್ಟ್‌ನಲ್ಲಿ ಈ ಆದೇಶ ಜಾರಿಗೊಳಿಸದಂತೆ ತಡೆ ಕೋರಿದ್ದರು. ಸುದೀರ್ಘ ವಾದ – ವಿವಾದಗಳನ್ನು ಆಲಿಸಿದ ನ್ಯಾಯಾಲಯ ಮೇ 22 ರಂದು ತೀರ್ಪು ಅನ್ನು ಸರಕಾರದ ಪರವಾಗಿ ಹಾಗೂ ಮೂಲಗೇಣಿದಾರರ ಪರವಾಗಿ ನೀಡಿದೆ. ಇದು ನಮಗೆ ಬಲ ತಂದಿದೆ. ಮೂಲಗೇಣಿದಾರರೆಲ್ಲರೂ ಒಟ್ಟಾದರೆ ತಮ್ಮ ಹಕ್ಕನ್ನು ಪಡೆಯಲು ಸಾಧ್ಯವಿದೆ. 2008 ರಲ್ಲಿ ಕೇವಲ 25 ಕುಟುಂಬದ ಸದಸ್ಯರಿಂದ ಪ್ರಾರಂಭವಾದ ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ 3,500 ಸದಸ್ಯರನ್ನು ಹೊಂದಿದೆ. ಇನ್ನೂ ಲಕ್ಷಾಂತರ ಜನ ಸಂತ್ರಸ್ತರು ಈ ಕಾನೂನು ಜಾರಿಯಾಗುತ್ತೋ ಇಲ್ಲವೋ ಎಂದು ನೇಪಥ್ಯದಲ್ಲಿಯೇ ಕಾಯುತ್ತಿದ್ದರು, ಎಲ್ಲರೂ ಒಟ್ಟಾಗಿ ಸೇರಬೇಕು ಎಂದು ತಿಳಿಸಿದರು.

ಈ ಆದೇಶದ ಬಳಿಕ ಸಂತ್ರಸ್ತ ಮೂಲಗೇಣಿ ಹಾಗೂ ಒಳ ಮೂಲಗೇಣಿದಾರರು ತೆರೆಮರೆಯಿಂದ ಹೊರಗೆ ಬರಬೇಕು. ಜೊತೆಗೆ ವೇದಿಕೆ ಪರವಾಗಿ ವಾದ ಮಂಡಿಸಿದ ವಕೀಲರ ವೆಚ್ಚ ಭರಿಸಲು ತಮ್ಮಿಂದಾದಷ್ಟು ನೆರವು ನೀಡಿ ವೇದಿಕೆ ಹೊರೆ ಕಡಿಮೆ ಮಾಡಲು ಸಹಕರಿಸಬೇಕು ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್, ವೇದಿಕೆ ಪದಾಧಿಕಾರಿಗಳಾದ ಎಂ.ಕೆ.ಯಶೋಧರ, ಹ್ಯೂಗ್ ವಾಸ್, ಉಪೇಂದ್ರ ನಾಯಕ್, ರೊನಾಲ್ಡ್  ಮಾರ್ಟಿಸ್ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com