ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಶಕ್ತಿ ಯೋಜನೆಯ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೀಪ ಬೆಳಗುವ ಮೂಲಕ ಶಕ್ತಿ ಯೋಜನೆ ಉದ್ಘಾಟಿಸಿದರು. ಬಳಿಕ ಶಕ್ತಿ ಯೋಜನೆಯ ಲೋಗೊ ಮತ್ತು ಸ್ಮಾರ್ಟ್ ಕಾರ್ಡ್ ಮಾದರಿ ಬಿಡುಗಡೆ ಮಾಡಿದರು. ಇದೇ ವೇಳೆ ಸಾಂಕೇತಿಕವಾಗಿ ಐದು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಯಿತು.
ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮ್ಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಎಂಟಿಸಿ ಬಸ್ನಲ್ಲಿ ಮೆಜೆಸ್ಟಿಕ್ಗೆ ಒಟ್ಟಿಗೆ ಪ್ರಯಾಣ ಬೆಳೆಸಿದರು.
ಡಿಸಿಎಂ ಡಿಕೆಶಿ ಅವರು ಮಹಿಳೆಯರಿಗೆ ಉಚಿತವಾಗಿ ಟಿಕೆಟ್ ಸಹ ವಿತರಣೆ ಮಾಡಿದರು. ಬಸ್ ಮೆಜಿಸ್ಟಿಕ್ ತಲುಪಿದ ಬಳಿಕ ಧರ್ಮಸ್ಥಳಕ್ಕೆ ಹೊರಡುವ ಮೊದಲ ಕೆಎಸ್ಆರ್ಟಿಸಿ ಬಸ್ನಲ್ಲಿ ಸಿಎಂ ಸಿದ್ದರಾಮಯ್ಯ ಟಿಕೆಟ್ ವಿತರಣೆ ಮಾಡುವ ಮೂಲಕ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ ನೀಡಿದರು. ಮೆಜೆಸ್ಟಿಕ್ನಿಂದ ಹೊರಟ ಬಸ್ಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಾರಿಗೆ ಸಚಿವರು ಹಸಿರು ನಿಶಾನೆ ತೋರಿದರು.