Breaking News

ಗ್ಯಾರಂಟಿ ಅನುಷ್ಠಾನದಿಂಧ ಬಿಜೆಪಿ ಬೆಚ್ಚಿಬಿದ್ದಿದೆ: ರಮಾನಾಥ ರೈ

 

 ಮಂಗಳೂರು: ಚುನಾವಣೆಯ ವೇಳೆ ಪಕ್ಷವು ನೀಡಿದ್ದ ಭರವಸೆ ‘ಗ್ಯಾರಂಟಿ’ಗಳನ್ನು ಅಧಿಕಾರ ಹಿಡಿದ ಎರಡು ವಾರದಲ್ಲಿ ಜಾರಿಗೊಳಿಸುವ ಮೂಲಕ ದೇಶದಲ್ಲೇ ಕಾಂಗ್ರೆಸ್ ಹೊಸ ಭಾಷ್ಯವನ್ನು ಬರೆದಿದೆ. ಈ ಕ್ರಮದಿಂದ ಬಿಜೆಪಿ ಸಂಪೂರ್ಣ ತತ್ತರಿಸಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದ ಯಾವ ರಾಜ್ಯದಲ್ಲೂ ಇಂತಹ ಗ್ಯಾರಂಟಿಗಳ ಅನುಷ್ಠಾನವಾಗಿಲ್ಲ. ನಮ್ಮದು ನುಡಿದಂತೆ ನಡೆಯುವ ಸರಕಾರವಾಗಿದೆ. ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದ ಬಿಜೆಪಿಗರು ಕಾಂಗ್ರೆಸ್ ಅಧಿಕಾರಕ್ಕೇರಿದಾಗ ತಕ್ಷಣವೇ ಗ್ಯಾರಂಟಿ ಜಾರಿಗೆ ತನ್ನಿ ಎನ್ನುವ ಮೂಲಕ ದ್ವಂದ ನಿಲುವು ತಾಳಿದ್ದರು. ಇದೀಗ ಕಾಂಗ್ರೆಸ್ ಮೊದಲ ಸಚಿವ ಸಂಪುಟ ಸಭೆಯಲ್ಲೇ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಇದರಿಂದ ಬಿಜೆಪಿ ಉತ್ತರಿಸಲಾಗದೆ ತತ್ತರಿಸಿದೆ ಎಂದು ತಿಳಿಸಿದರು.

  1.  

ಉಚಿತ ಭಾಗ್ಯಗಳನ್ನು ಕೊಡುವುದರಿಂದ ದೇಶ ದಿವಾಳಿ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಸಾಲಮೇಳ ಮಾಡಿದಾಗಲೂ ಬಿಜೆಪಿಗರು ಟೀಕಿಸಿದ್ದರು. ಉಚಿತ ಅಕ್ಕಿ ಕೊಡುವಾಗಲೂ ಆಕ್ಷೇಪಿಸಿದ್ದರು. ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕಿದ್ದ ಬಿಜೆಪಿಗರು ಬಂಡವಾಳ ಶಾಹಿಗಳ ಸಾವಿರಾರು ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಆರು ತಿಂಗಳೊಳಗೆ ವಿದೇಶದಲ್ಲಿನ  ಕಪ್ಪು ಹಣ ತರುತ್ತೇವೆ ಎಂದು ಹೇಳಿದವರು ಮರೆತಿದ್ದಾರೆ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುತ್ತೇವೆ ಎಂದಿದ್ದ ಬಿಜೆಪಿ, ಕೇಂದ್ರದಲ್ಲಿ ಅಧಿಕಾರ ಹಿಡಿದು ಒಂಭತ್ತು ವರ್ಷಗಳಾದರೂ ಭರವಸೆ ಈಡೇರಿಸಿಲ್ಲ. ಆದರೆ ಮತದಾನದ ಸಂದರ್ಭ ಕೈಬೆರಳಿಗೆ ಹಾಕಿದ್ದ ಶಾಯಿಯ ಗುರುತು ಮಾಸುವ ಮುನ್ನವೇ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ತಿಳಿಸಿದರು.

ಮಾಜಿ ಮೇಯರ್ಗಳಾದ ಶಶಿಧರ ಹೆಗ್ಡೆ, ಕೆ. ಅಶ್ರಫ್, ಭಾಸ್ಕರ ಮೊಯಿಲಿ, ಮಾಜಿ ಉಪಮೇಯರ್ ಸಲೀಂ, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಪಕ್ಷದ ಮುಖಂಡರಾದ ಟಿ.ಕೆ.ಸುಧೀರ್, ಜಯಶೀಲ ಅಡ್ಯಂತಾಯ, ಸಿಎಂ ಮುಸ್ತಫಾ, ಅಪ್ಪಿ, ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ಉದಯ ಆಚಾರ್, ಸುಹೈಲ್ ಕಂದಕ್, ಪೃಥ್ವಿರಾಜ್, ನಝೀರ್ ಬಜಾಲ್, ಶಬ್ಬೀರ್ ಸಿದ್ದಕಟ್ಟೆ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com