Breaking News

ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ್ತಿ ಸಾಲಿಹಾತ್ ಹೃದಯಾಘಾತದಿಂದ ನಿಧನ

 

ಬೆಳ್ತಂಗಡಿ: ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೆಯ ವಿದ್ಯಾರ್ಥಿ ಸಾಲಿಹಾತ್ (24) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರಿಗೆ ತಂದೆ, ತಾಯಿ, ಪತಿ ಇದ್ದಾರೆ.

ಪಡಂಗಡಿ ಪೊಯ್ಯೆಗುಡ್ಡೆ ನಿವಾಸಿ ಆದಂ ಮತ್ತು ಹವ್ವಮ್ಮ ದಂಪತಿ ಪುತ್ರಿ ಆಗಿರುವ ಸಾಲಿಹಾತ್ ವರ್ಷದ ಹಿಂದೆ ವಿವಾಹ ಆಗಿದ್ದರು, ಚಿಕ್ಕಮಗಳೂರಿನಲ್ಲಿ ಪತಿ ಮನೆಯಲ್ಲಿದ್ದವರು. ಹೃದಯ ಸಮಸ್ಯೆಯಿಂದಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬುಧವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದು, ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

  1.  

ಪಡಂಗಡಿಯಲ್ಲಿ ಪ್ರಾಥಮಿಕ, ಎಸ್.ಡಿ.ಎಂ. ಅನುದಾನಿತ ಪ್ರೌಢಶಾಲೆ ಉಜಿರೆಯಲ್ಲಿ 9 ನೇ ತರಗತಿ, ಮುಂಡಾಜೆಯಲ್ಲಿ 10 ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿ, ಉಜಿರೆ ಎಸ್.ಡಿ.ಎಂ.ನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆದಿದ್ದ ಸಾಲಿಯತ್, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು.

ಹೈದರ್ ಪಡಂಗಡಿ ಅವರ ಗರಡಿಯಲ್ಲಿ ಆರಂಭದ ತರಬೇತಿ ಪಡೆದಿದ್ದ ಅವರು, ಮುಂದೆ ಪ್ರೌಢಶಿಕ್ಷಣವನ್ನು ಮುಂಡಾಜೆ ಶಿಕ್ಷಣ ಸಂಸ್ಥೆಯಲ್ಲಿ ಪಡೆಯುತ್ತಿದ್ದ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಗುಣಪಾಲ್ ಎಂ.ಎಸ್. ಅವರ ಗರಡಿಯಲ್ಲಿ ಪಳಗಿ  ಅವರು ವಾಲಿಬಾಲ್ ಆಟದಲ್ಲಿ ಅತ್ಯಂತ ಉತ್ಕೃಷ್ಟ ಪ್ರದರ್ಶನ ನೀಡಿ ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ರಾಜ್ಯ ತಂಡ  ದ್ವಿತೀಯ ಸ್ಥಾನ ಗಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ವ್ಯಾಸಂಗ ಮಾಡುವ ವೇಳೆ ರಾಜ್ಯದ ಉತ್ತಮ ವಾಲಿಬಾಲ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು.

ರಾಷ್ಟ್ರ ಮಟ್ಟದ ವಾಲಿಬಾಲ್ ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜೂನಿಯರ್ ನ್ಯಾಷನಲ್ ನಲ್ಲಿ ತೃತೀಯ ಸ್ಥಾನ ಗಳಿಸಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com