Breaking News

ಕಾಂಗ್ರೆಸ್ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್

 

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಸಮುದಾಯಗಳ ನಡುವೆ ಒಡಕು ಮೂಡಿಸಿ ದ್ವೇಷದ ರಾಜಕಾರಣದ ಮೂಲಕ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆದು ಕೋಮು ಭಾವನೆ ಕೆರಳಿಸುವ ಕೃತ್ಯ ನಡೆಯುತ್ತಿದೆ. ಕೆಲವೆಡೆ ಪಾಕಿಸ್ಥಾನದ ಧ್ವಜ ಹಾರಿಸುವ ಮೂಲಕ ದೇಶ ದ್ರೋಹದ ಕೆಲಸವೂ ನಡೆದಿದೆ. ಈ ಎಲ್ಲ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವದಲ್ಲಿ ಘೋಷಿಸಿದ `ಗ್ಯಾರಂಟಿ’ ಈಗಲೇ ದೊಡ್ಡ ಮಟ್ಟದ ಗೊಂದಲಕ್ಕೆ ಎಡೆ ಮಾಡಿದೆ. ಸರಕಾರ ಬಂದ 24 ಗಂಟೆಯಲ್ಲೇ ಗ್ಯಾರಂಟಿ ಜಾರಿ ಎಂದು ಘೋಷಿಸಿದ್ದ ಕಾಂಗ್ರೆಸ್ ಈಗ ಪೊಳ್ಳು ಭರವಸೆಗಳನ್ನು ಈಡೇರಿಸಲು ಪರದಾಡುತ್ತಿದೆ. ಸರಕಾರ ಬಂದು 10 ದಿನ ಕಳೆದರು ಯಾವುದೇ ಸ್ಪಷ್ಟತೆ ಇಲ್ಲದೆ ಅನಗತ್ಯ ವಿಳಂಬ ಮಾಡಿ ಗ್ಯಾರಂಟಿಗಳಿಗೆ ನಿಯಮ ತರಲು ಹೊರಟಿದೆ. ಬಸ್ ಗಳಲ್ಲಿ ಜನ ಟಿಕೆಟ್ ಇಲ್ಲದೆ ಪ್ರಯಾಣಿಸಿ ನಿರ್ವಾಹಕರಲ್ಲಿ ಗಲಾಟೆ ಮಾಡುತ್ತಿದ್ದಾರೆ. ವಿದ್ಯುತ್ ಬಿಲ್ ಪಾವತಿಗೂ ಜನ ಕೆಲವೆಡೆ ತಗಾದೆ ತೆಗೆದು ಮೀಟರ್ ರೀಡಿಂಗ್‍ಗೆ ಬಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ. ಯಾವುದೇ ಸ್ಪಷ್ಟತೆ ಇಲ್ಲದೆ ಯೋಜನೆ ಘೋಷಿಸಿದ್ದರ ಪರಿಣಾಮ ಇದಾಗಿದೆ. ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಆರಂಭದಲ್ಲೇ ಗೊಂದಲಮಯವಾಗಿದೆ ಎಂದು ತಿಳಿಸಿದರು.

ಗ್ಯಾರಂಟಿಗೆ ನಿಯಮ ಯಾಕೆ? ಗ್ಯಾರಂಟಿ ಯೋಜನೆ ನಿಮಗೂ ಇದೆ, ನಮಗೂ ಇದೆ ಎಂದು ಚುನಾವಣೆ ಭಾಷಣದಲ್ಲಿ ಸಿದ್ದರಾಮಯ್ಯ, ಡಿಕೆಶಿ ಘೋಷಿಸಿದ್ದರು. ಬಸ್‍ನಲ್ಲಿ ಮದುವೆಗೂ ಫ್ರೀ, ದೇವಸ್ಥಾನಕ್ಕೂ ಫ್ರೀ, ಮಾವನ ಮನೆಗೂ ಫ್ರೀ, ತವರು ಮನೆಗೂ ಫ್ರೀ ಎಂದು ಅಂದು ಭಾಷಣ ಬಿಗಿದಿದ್ದರು. ಇದೀಗ ಅದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ನಿರುದ್ಯೋಗಿಗಳಿಗೆ ಘೋಷಿಸಿದ ನಿರುದ್ಯೋಗ ಭತ್ಯೆ ಕೇವಲ 2022-23ನೇ ಸಾಲಿನ ನಿರುದ್ಯೋಗಿಗಳಿಗೆ ಮಾತ್ರ ಅನ್ವಯ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಕಾಂಗ್ರೆಸ್ ಜನರನ್ನು ಮರಳು ಮಾಡಿ ಅಧಿಕಾರಕ್ಕೇರಿರುವುದು ಸ್ಪಷ್ಟವಾಗಿದೆ. ಗ್ಯಾರಂಟಿ ಜಾರಿಗೆ ನಿಯಮ ತಂದು ಜನರನ್ನು ಕಾಂಗ್ರೆಸ್ ವಂಚಿಸಲು ಹೊರಟಿದೆ. ನಮಗೂ ಫ್ರೀ, ನಿಮಗೂ ಫ್ರೀ ಅಂತ ಹೇಳುವಾಗ ಈ ಎಲ್ಲ ಪುಕ್ಕಟೆ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಬಜೆಟ್ ಬೇಕು ಎಂಬ ಕನಿಷ್ಠ ಜ್ಞಾನ ನಿಮಗೆ ಇರಲಿಲ್ಲವೇ ? 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿದ ನೀವು, ಈಗ ಅದು ಕೇವಲ 200 ಯೂನಿಟ್ ಒಳಗೆ ಉಪಯೋಗಿಸಿದವರಿಗೆ ಮಾತ್ರ ಎಂದು ಕಂಡೀಶನ್ ಹಾಕುತ್ತಿದ್ದೀರಿ. ಇದು ಯಾವ ನ್ಯಾಯ ? ಎಂದು ಪ್ರಶ್ನಿಸಿದ ಅವರು, ನೀವು ಘೋಷಿಸಿದ ಎಲ್ಲ ಗ್ಯಾರೆಂಟಿಗಳನ್ನು ಯಾವುದೇ ಷರತ್ತುಗಳು ಇಲ್ಲದೆ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.

  1.  

ಕಾಂಗ್ರೆಸ್ ಪಕ್ಷ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿದೆ. ಆದರೆ ಈಗಾಗಲೇ ಕೇಂದ್ರ ಸರಕಾರದಿಂದ 5 ಕೆಜಿ ಅಕ್ಕಿ ಪಡಿತರ ಮೂಲಕ ವಿತರಣೆ ಆಗುತ್ತಿದೆ. ಕಾಂಗ್ರೆಸ್ ಈಗ ಕೇವಲ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಿ ಜನರಿಗೆ ಮಂಕುಬೂದಿ ಎರಚಲು ಸಿದ್ಧತೆ ಮಾಡಿಕೊಂಡಿದೆ. ಕಾಂಗ್ರೆಸ್ ಘೋಷಿಸಿದಂತೆ ಕೇಂದ್ರದ ಪಾಲಿನ 5 ಕೆಜಿ ಅಕ್ಕಿ ಹೊರತುಪಡಿಸಿ ರಾಜ್ಯ ಸರಕಾರದಿಂದಲೇ ತಲಾ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಿ ಎಂದು ಆಗ್ರಹಿಸಿದರು.

ಅಭಿವೃದ್ಧಿ ವಿರೋಧಿ ನಡೆ ಬಿಜೆಪಿ ಸರಕಾರದ ಅವಧಿಯಲ್ಲಿ ಕಾಮಗಾರಿಗಳು ಅನುಮೋದನೆಗೊಂಡು ಅದಕ್ಕೆ ಬಿಡುಗಡೆಯಾದ ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ಅನುದಾನವನ್ನು ತಡೆಹಿಡಿಯುವ ಮೂಲಕ ರಾಜಕೀಯ ಹಗೆತನ ಸಾಧಿಸಿ ಅಭಿವೃದ್ಧಿ ವಿರೋಧಿ ನಡೆಯನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಅನುದಾನವನ್ನು ತಡೆಹಿಡಿಯುವ ಕೆಲಸವನ್ನು ಸರಕಾರ ಮಾಡಬಾರದು. ಬಿಜೆಪಿ ಸರಕಾರ ಇಂತಹಾ ಕೀಳು ಮಟ್ಟದ, ಅಭಿವೃದ್ಧಿ ವಿರೋಧಿಯ ರಾಜಕೀಯ ಹಗೆತನವನ್ನು ಎಂದೂ ಮಾಡಿಲ್ಲ. ಹಿಂದಿನ ಸರಕಾರದ ಕಾಮಗಾರಿಗಳನ್ನು ಮುಂದುವರಿಸುವ ಕೆಲಸವನ್ನು ನಮ್ಮ ಅವಧಿಯಲ್ಲಿ ಮಾಡಲಾಗಿತ್ತು. ಕಾಮಗಾರಿಗಳನ್ನು ತಡೆಹಿಡಿಯುವ ಮೂಲಕ ಅನಗತ್ಯ ಗೊಂದಲ ಮೂಡಿಸುವ ಕೆಲಸವನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿದರು.

ದ.ಕ., ಉಡುಪಿ ಜನರನ್ನು ವಂಚಿಸಬೇಡಿ : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಂದಿಗೆ ಗ್ಯಾರಂಟಿ ಯೋಜನೆ ಕೊಡಬಾರದು ಎಂದು ಜಾಲತಾಣಗಳಲ್ಲಿ ಬರೆಯುವ ಕಾಂಗ್ರೆಸ್ ಪಕ್ಷದವರಿಗೆ ನಾಚಿಕೆ ಆಗಬೇಕು. ದಕ ಜಿಲ್ಲೆಯ 8 ಕ್ಷೇತ್ರದಲ್ಲಿ 5 ಲಕ್ಷಕ್ಕೂ ಅಧಿಕ ಮತ ಪಡೆದ ಕಾಂಗ್ರೆಸ್ ಪಕ್ಷ ಈಗ ಹೀಗೆ ಹೇಳುವುದು ಸರಿಯಲ್ಲ. ಕೇವಲ ಗೆಲ್ಲಿಸಿದ ಕ್ಷೇತ್ರಗಳಿಗೆ ಮಾತ್ರ ಗ್ಯಾರಂಟಿ ಕೊಡುವ ಕಾಂಗ್ರೆಸ್ ಮನಸ್ಥಿತಿ ಸರಿಯಲ್ಲ ಎಂದರು.

ದೈವ, ದೇವತೆಗಳಿಗೆ ಅವಮಾನ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸತ್ಯಸಾರಮಣಿ ದೈವದ ಮೇಲೆ ಪ್ರಮಾಣ ಮಾಡಿ ಪ್ರತಿಜ್ಞೆ ಸ್ವೀಕರಿಸಿರುವುದನ್ನು ವಿರೋಧಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ತುಳುನಾಡಿನ ದೈವ, ದೇವರಿಗೆ ಅಪಮಾನ ಮಾಡಿದ್ದಾರೆ. ಆರಂಭದಲ್ಲಿ ಇದೇ ರೀತಿಯಲ್ಲಿ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾಗ ಸಿದ್ದರಾಮಯ್ಯ ಅವರು ಯಾಕೆ ಮಾತನಾಡಲಿಲ್ಲ ?, ಕಾಂಗ್ರೇಸ್ಸಿನ ಕೆಲವು ಶಾಸಕರು ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ಸಿದ್ದರಾಮಯ್ಯ ಎಲ್ಲಿದ್ದರು?  ಎಂದು ಶಾಸಕ ಕಾಮತ್ ಪ್ರಶ್ನಿಸಿದರು.

ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ರವಿಶಂಕರ್ ಮಿಜಾರ್, ಉಪ ಮೇಯರ್ ಪೂರ್ಣಿಮಾ ಸೇರಿದಂತೆ ಹಲವರು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com