Breaking News

ಕರಾವಳಿ ಫಲಿತಾಂಶ ಆಘಾತಕಾರಿ: ವಿನಯಕುಮಾರ್ ಸೊರಕೆ

 

ಕಾಪು: ರಾಜ್ಯದಲ್ಲಿ ಜನರು ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ  ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿ, ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಆದರೆ ಕರಾವಳಿ ಭಾಗದಲ್ಲಿ ಇದಕ್ಕೆ ವ್ಯತಿರಿಕ್ತ ಫಲಿತಾಂಶ ಬಂದಿರುವುದು ನಿಜಕ್ಕೂ ಅಚ್ಚರಿ ಹಾಗೂ ಆಘಾತಕಾರಿ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಈಚೆಗೆ ನಡೆದ ವಿಧಾನಸಭಾ ಚುನಾವಣಾ ಕಾರ್ಯದಲ್ಲಿ ಅವಿರತ ಶ್ರಮಿಸಿದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ “ಕೃತಜ್ಞತಾ ಸಭೆ”ಯಲ್ಲಿ ಅವರು  ಮಾತನಾಡಿದರು.

ಚುನಾವಣಾ ಕಾರ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ನಿಷ್ಠೆ ಮತ್ತು ಅಭಿಮಾನದಿಂದ ಅವಿರತ ಶ್ರಮವಹಿಸಿದ್ದಾರೆ. ಆದರೆ ಮತದಾರರ ಮನ ಮುಟ್ಟುವಲ್ಲಿ ಸಂಪೂರ್ಣ ಯಶಸ್ಸು ಕಾಣಲು ವಿಫಲರಾಗಿರುವುದು ಹಾಗೂ ಪ್ರತಿಸ್ಪರ್ಧಿ ಅಭ್ಯರ್ಥಿಗಳಿಂದ ನಡೆದ ವ್ಯವಸ್ಥಿತ ಅಪಪ್ರಚಾರ ಹಾಗೂ ಹಣ ಬಲದ ಮುಂದೆ ನಮ್ಮ ಪ್ರಾಮಾಣಿಕ ಜನಸೇವೆ ಮಂಕಾಗಿ ಹೋಯಿತು ಎಂದರು.

  1.  

ಕಾಪು ಕ್ಷೇತ್ರದಲ್ಲಿ ನಮಗೆ ಸೋಲಾಗಿರಬಹುದು, ಆದರೆ ರಾಜ್ಯ ಸರ್ಕಾರ ಕಾಂಗ್ರೆಸ್ ನಮ್ಮದ್ದಾಗಿದೆ, ಹಾಗಾಗಿ ಅದರ ಪ್ರಯೋಜನವನ್ನು ಪಡೆದು ಅಭಿವೃದ್ಧಿ ದೃಷ್ಟಿಕೋಣದೊಂದಿಗೆ ಮುಂದೆ ಸಾಗೋಣ. ಸರ್ಕಾರದ ಸವಲತ್ತುಗಳನ್ನು ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಯತ್ನಿಸೋಣ ಈ ಮೂಲಕ ಮುಂಬರಲಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಹಾಗೂ 2024ರ ಲೋಕಸಭಾ ಚುನಾವಣೆಗೆ ಸಜ್ಜಾಗೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸೋಲಾಯಿತೆಂದು ಕಾರ್ಯಕರ್ತರು ಯಾರೂ ವಿಚಲಿತರಾಗದೆ ಯಾವುದೇ ಸಂದರ್ಭದಲ್ಲಿಯೂ ಎದೆ ಗುಂದಬೇಡಿ, ನಾನಂತೂ ನಿಮ್ಮೊಂದಿಗೆ ಈ ಹಿಂದೆ ಯಾವ ರೀತಿಯಲ್ಲಿ ನಿಮಗೆ ಸಹಕರಿಸಿ, ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಬೆಂಬಲಿಸುತ್ತಿದ್ದೇನೋ ಇನ್ನು ಅದಕ್ಕಿಂತಲೂ ಒಂದು ಪಟ್ಟು ಹೆಚ್ಚಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಎಸ್. ಸುವರ್ಣ ವಹಿಸಿ ಮಾತ ನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ರಾಜ್‍ಶೇಖರ್ ಕೋಟ್ಯಾನ್, ಕೆಪಿಸಿಸಿ ಸಂಯೋಜಕರಾದ ನವೀನ್ ಚಂದ್ರ ಜೆ.ಶೆಟ್ಟಿ ಅವರು ಚುನಾವಣಾ ಕಾರ್ಯನಿರ್ವಹಣೆ ಪರಾಮರ್ಶೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ದಿನೇಶ್ ಕೋಟ್ಯಾನ್ ಫಲಿಮಾರು ವಂದಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com