Breaking News

24 ಮಂದಿಗೆ ಮಂತ್ರಿ ಭಾಗ್ಯ: ದ.ಕ. ಉಡುಪಿ ನಿರ್ಲಕ್ಷ್ಯ, ಹಿರಿಯರ ಮುನಿಸು

 

ಬೆಂಗಳೂರು:  ಮುಖ್ಯಮಂತ್ರಿ ಆಯ್ಕೆಯ ವೇಳೆ ಇದ್ದಂತಹ ಅಸಮಾಧಾನ, ಪ್ರತಿಷ್ಠೆಯ ಜ್ವಾಲೆ ಸಚಿವ ಸಂಪುಟ ವಿಸ್ತರಣೆವರಿಗೂ ವ್ಯಾಪಿಸಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಹಗ್ಗಜಗ್ಗಾಟದ ನಡುವೆ ಸಚಿವರ ಪಟ್ಟಿ ಫೈನಲ್ ಆಗಿದೆ.

ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನೆಯಲ್ಲಿ ನಡೆದ ಮ್ಯಾರಾಥಾನ್ ಸಭೆಯ ನಂತರ ಪಟ್ಟಿಗೆ ಅಂತಿಮ ಮುದ್ರೆ ಒತ್ತಲಾಗಿದೆ. ಹಿರಿಯ ಶಾಸಕರಿಗೆ ಈ ಬಾರಿ ಸಚಿವ ಸ್ಥಾನ ತಪ್ಪಿವೆ. ಅದರಲ್ಲೂ ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪುಟದಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ.

  1.  

ಉತ್ತರ ಕನ್ನಡ ಜಿಲ್ಲೆಯ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ, ಸಿದ್ದರಾಮಯ್ಯ ಆಪ್ತ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್ ನಾಯಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಾಂಗ್ರೆಸಿಗ ಬಿ.ಕೆ.ಹರಿಪ್ರಸಾದ್, ತುಮಕೂರು ಜಿಲ್ಲೆಯ ಹಿರಿಯ ಶಾಸಕ ಟಿ.ಬಿ. ಜಯಚಂದ್ರ, ಮೈಸೂರಿನ ಆರು ಬಾರಿಯ ಶಾಸಕ ತನ್ವೀರ್ ಸೇಠ್, ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದ ವಿನಯ ಕುಲಕರ್ಣಿಗೆ ಸಚಿವ ಸ್ಥಾನ ಸಿಕ್ಕಿಲ್ಲ. 135 ಶಾಸಕರು ಗೆದ್ದಿರುವುದರಿಂದ ಪರಿಷತ್ತಿನ ಯಾವುದೇ ಸದಸ್ಯರಿಗೂ ಸಚಿವ ಸ್ಥಾನ ನೀಡಿಲ್ಲ. ಡಿಕೆಶಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿಕೆ ಹರಿಪ್ರಸಾದ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಚಿವ ಸ್ಥಾನ ಖಚಿತ ಎನ್ನಲಾಗಿತ್ತು. ಆದರೆ ಸಿದ್ದರಾಮಯ್ಯ ಜತೆಗೆ ವೈಮನಸ್ಸು ಇರುವ ಕಾರಣದಿಂದ ಸಚಿವ ಸ್ಥಾನಕ್ಕೆ ಅವರ ಹೆಸರನ್ನು ಪರಿಗಣಿಸಿಲ್ಲ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಆಪ್ತ ಡಾ.ಎಚ್.ಸಿ ಮಹದೇವಪ್ಪ, ಕೆ.ವೆಂಕಟೇಶ್, ರುದ್ರಪ್ಪ ಲಮಾಣಿ, ಎಂ.ಸಿ.ಸುಧಾಕರ್, ಬೆಳಗಾವಿ ಜಿಲ್ಲೆಯಿಂದ ಲಕ್ಷ್ಮೀ ಹೆಬ್ಬಾಳ್ಕರ್, ಕೋಲಾರದಿಂದ ಬೋಸರಾಜು, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿ. ನಾಗೇಂದ್ರ, ಆರ್.ಬಿ. ತಿಮ್ಮಾಪುರ, ಕೆ.ಎನ್.ರಾಜಣ್ಣ, ಶಿವಾನಂದ ಪಾಟೀಲ್, ಚೆಲುವರಾಯ ಸ್ವಾಮಿ, ಪುಟ್ಟರಂಗಶೆಟ್ಟಿ, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಭಟ್ಕಳದ ಮಂಕಾಳ ವೈದ್ಯ, ಮಧು ಬಂಗಾರಪ್ಪ, ಶಿವರಾಜ ತಂಗಡಗಿ, ಈಶ್ವರ ಖಂಡ್ರೆ, ಕಲಬುರಗಿಯ ರಹೀಂ ಖಾನ್, ಡಾ.ಶರಣ ಪ್ರಕಾಶ್ ಪಾಟೀಲ್, ನರೇಂದ್ರಸ್ವಾಮಿ, ಭೈರತಿ ಸುರೇಶ್ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಶನಿವಾರ ಬೆಳಿಗ್ಗೆ 11.30 ಕ್ಕೆ ರಾಜಭವನದಲ್ಲಿ 23 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈಡಿಗ-ಬಿಲ್ಲವ ಸಮುದಾಯದಿಂದ ಮಧು ಬಂಗಾರಪ್ಪಗೆ ಸಚಿವ ಸ್ಥಾನ ನೀಡಿರುವುದರಿಂದ ಮತ್ತೊಬ್ಬ ವ್ಯಕ್ತಿಗೆ ನಿರಾಕರಿಸಲಾಗಿದೆ. ಇದರಿಂದ ತೀವ್ರ ಸಿಟ್ಟು ಮತ್ತು ಬೇಸರಕ್ಕೆ ಒಳಗಾಗಿರುವ ಬಿಕೆ ಹರಿಪ್ರಸಾದ್ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಒಟ್ಟು 24 ಸಚಿವ ಸ್ಥಾನ ಭರ್ತಿ ಮಾಡಲಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com