Breaking News

ಗ್ಯಾರಂಟಿಗಳ ಅನುಷ್ಟಾನ ಖಚಿತ, ಬಿಜೆಪಿಗೆ ಬೇಡ ಆತುರ: ಐವನ್ ಡಿಸೋಜ

 

ಮಂಗಳೂರು: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ  ನೇತೃತ್ವದ ಕಾಂಗ್ರೆಸ್ ಸರಕಾರ  ಮೊದಲ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಆದೇಶವು ಜಾರಿ ಆಗಿದೆ,  ಇನ್ನು ಫಲಾನುಭವಿಗಳ ಆಯ್ಕೆ ಮಾಡುವುದಷ್ಟೇ ಬಾಕಿ ಇದೆ.  ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾಗಿದ್ದು, ಆದರೆ ಬಿಜೆಪಿ ಬಹಳ ಅವಸರದಲ್ಲಿಇದ್ದ ಹಾಗೇ ಕಾಣುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್‌ ನೀಡಿದ್ದ ಗ್ಯಾರಂಟಿಗಳನ್ನು ಜನರು ಕಸದ ಬುಟ್ಟಿಗೆ ಹಾಕುತ್ತಾರೆ ಎಂದು ಟೀಕೆ ಮಾಡದ್ದರು. ಆದರೆ ಈಗ ಬಿಜೆಪಿ ನಾಯಕರು ಗ್ಯಾರಂಟಿಗಳನ್ನು ಷರತ್ತು ಇಲ್ಲದೇ ಜಾರಿಗೆ ತರುವಂತೆ ಹೇಳುತ್ತಿದ್ದಾರೆ. ಅವರಿಗೇಕೆ ಇಷ್ಟು ಅವಸರ, ಫಲಾನುಭವಿಗಳನ್ನು ಗುರುತಿಸುವುದು ಬೇಡವಾ ಎಂದು ಆಕ್ರೋಶ ಹೊರಹಾಕಿದರು.

ನಾವು ಜಾರಿ ಮಾಡುತ್ತೇವೆ ಎಂದು ಹೇಳಿದ್ದು, ಜಾರಿ ಆಗಿದೆ. ಆದರೆ ಬಿಜೆಪಿ ಬೊಕ್ಕಸ ಲೂಟಿ ಮಾಡಿದೆ. ಖಜಾನೆ ಖಾಲಿ ಆಗಿರುವ ಹಿನ್ನೆಲೆಯಲ್ಲಿ  ಅದನ್ನು ತುಂಬಿಸಲು ನೂತನ ಸರಕಾರ ಚಿಂತನೆ ನಡೆಸುತ್ತಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಬೇಕಾಗಿದೆ ಎಂದರು.

  1.  

ಕಾಂಗ್ರೆಸ್‌ನ ಗ್ಯಾರಂಟಿ ಜಾರಿಗೆ ತರುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ ಬಿಜೆಪಿಯವರು ಅಧಿಕಾರ ಕಳೆದುಕೊಂಡು ಗೊಂದಲದಲ್ಲಿ ಸಿಲುಕಿದ್ದಾರೆ. ಅವರಿಗೆ ಕಾಂಗ್ರೆಸ್‌ ಗ್ಯಾರಂಟಿ ಬಗ್ಗೆ ಕೇಳುವ ನೈತಿಕತೆ ಇಲ್ಲ, ನೈತಿಕತೆ ಇದ್ದರೆ ಹಿಂದೆ ಪ್ರಧಾನಿ ಮೋದಿ ಭರವಸೆ ನೀಡಿದ್ದ 15 ಲಕ್ಷ  ರೂಪಾಯಿ ಪ್ರತಿಯೊಬ್ಬರ ಖಾತೆಗೆ ಹಾಕಿಸಲಿ, ರೈತರ ಆದಾಯ ಡಬಲ್ ಮಾಡಲಿ ಎಂದು ಸವಾಲು ಹಾಕಿದರು.

ಎಂಆರ್‌ಪಿಎಲ್‌ನಲ್ಲಿ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಹುದ್ದೆಗಳೆಲ್ಲ ಡಿಪ್ಲೊಮಾ ಎಂಜಿನಿಯರ್‌ಗಳ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.  ಕಳೆದ ಬಾರಿ 235ರಲ್ಲಿ ಹುದ್ದೆಗಳಲ್ಲಿ 3ನ್ನು ಮಾತ್ರ ಕನ್ನಡಿಗರಿಗೆ ನೀಡಲಾಗಿತ್ತು. ಆದುದರಿಂದ ಕೂಡಲೆ ಆನ್ ಲೈನ್ ಅರ್ಜಿ ರದ್ದು ಮಾಡಿ. ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಿ. ರಾಜ್ಯದವರಿಗೆ ಅದರಲ್ಲೂ ಜಾಗ ಕಳೆದುಕೊಂಡ ಸ್ಥಳೀಯರಿಗೆ  ಉದ್ಯೋಗ ನೀಡಲಿ ಎಂದು ಆಗ್ರಹಿಸಿದರು.

2006 ರಲ್ಲಿ ಎಂಎಸ್‌ಇಜೆಡ್‌ಗೆ ಭೂಮಿ  ಬಿಟ್ಟು ಕೊಟ್ಟ  250 ಕುಟುಂಬಗಳಿಗೆ ಉದ್ಯೋಗ ನೀಡಿಲ್ಲ. ಜೆಬಿಎಫ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದ 76 ನಿರಾಶ್ರಿತ ಅಭ್ಯರ್ಥಿಗಳಿಗೆ 30 ತಿಂಗಳು ಕಳೆದರೂ ಸಂಬಳ ಸಿಕ್ಕಿಲ್ಲ. ಎಂಆರ್‌ಪಿಎಲ್‌ನ ನಾಲ್ಕನೇ ಹಂತದ ಯೋಜನೆಗೆ ಭೂಮಿ ನೀಡಿದ್ದ  450 ಕುಟುಂಬಗಳಿಗೆ 6 ವರ್ಷ ಕಳೆದರೂ ಉದ್ಯೋಗ ಭರವಸೆ ಇನ್ನೂ ಈಡೇರಿಲ್ಲ. 2013ರಲ್ಲಿ ಯುಪಿಎ ಸರಕಾರ ಜಾರಿಗೊಳಿಸಿದ್ದ ಭೂಸ್ವಾಧೀನ ಕಾಯ್ದೆಗೆ 2022ರಲ್ಲಿ ಕರ್ನಾಟಕದ ಬಿಜೆಪಿ ಸರಕಾರ ತಿದ್ದುಪಡಿ ಮಾಡಿ , ಕೈಗಾರಿಕೆ ಸ್ಥಾಪನೆ ವೇಳೆ ಭೂಮಿ ಕಳೆದು ಕೊಂಡ ನಿರ್ವಹಿಸಿತರಿಗೆ ದೊರಕುವ ಉದ್ಯೋಗ ಮತ್ತು ಪುನರ್ವಸತಿ ನಿವೇಶನದ ಹಕ್ಕನ್ನು ಕಸಿದು ಕೊಳ್ಳಲಾಗಿತ್ತು. ಸ್ಥಳೀಯರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದರು.

ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ ಮತ್ತು ಅಶ್ರಫ್, ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ, ಪಕ್ಷದ ಧುರೀಣರಾದ ಭಾಸ್ಕರ್, ಸುಧೀರ್ ಶೆಟ್ಟಿ, ನಝೀರ್, ಮುಸ್ತಫಾ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com