
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಇರುವ ಮೂನ್ಸೂಚನೆಯ ನೀಡಿರುವ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ನುಡಿದಿರುವ ಹಿನ್ನಲೆಯಲ್ಲಿ ಎಲ್ಲರ ಕಣ್ಣು ಜೆಡಿಎಸ್ ಪಕ್ಷದತ್ತ ಹೊರಳಿದೆ. ಏನಾದರೂ ಮಾಡಿ ಈ ಬಾರಿ ಸರ್ಕಾರ ರಚನೆ ಮಾಡಲೇಬೇಕು ಎಂದು ಹಟ್ಟಕ್ಕೆ ಬಿದ್ದಿರುವ ಕಾಂಗ್ರೆಸ್ ಒಳಗೊಳಗೆ ಕಸರತ್ತು ಶುರು ಮಾಡಿಕೊಂಡಿದೆ. ಇನ್ನೂ ಬಿಜೆಪಿ ಕೂಡ ಇದೇ ಹಾದಿಯಲ್ಲಿದೆ.
ನನಗೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ಯಾವುದೇ ಅಸಮಾಧಾನವಿಲ್ಲ. ನಮ್ಮ ಷರತ್ತು ಯಾವ ಪಕ್ಷ ಪೂರೈಸುತ್ತದೆ ಎಂಬುದರ ಆಧಾರದ ಮೇಲೆ ಬಿಜೆಪಿ ಅಥವಾ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದನ್ನು ನಿರ್ಧರಿಸುತ್ತೇವೆ. ಮೈತ್ರಿಗೆ ನಾವು ಸಿದ್ಧ ಎಂದು ಎಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸಿಂಗಾಪುರಕ್ಕೆ ತೆರಳುವ ಮೊದಲು ಕುಮಾರಸ್ವಾಮಿ ಅವರು ಮಾಧ್ಯಮದವರ ಜತೆಗೆ ಮಾಹಿತಿ ಹಂಚಿಕೊಂಡಿದ್ದು, ಈ ಬಾರಿ ನನ್ನ ಷರತ್ತುಗಳನ್ನು ಈಡೇರಿಸಲು ಒಪ್ಪುವ ಪಕ್ಷದೊಂದಿಗೆ ಹೋಗುತ್ತೇನೆ. ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರಲು ಸಮ್ಮಿಶ್ರ ಪಕ್ಷದ ಪಾಲುದಾರರು ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.
ಮತದಾನ ನಡೆದ ದಿನ 10 ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿದ್ದು ಕಾಂಗ್ರೆಸ್ ಅಧಿಕ ಸ್ಥಾನ ಪಡೆದರೂ, ಯಾವುದೇ ಪಕ್ಷಕ್ಕೆ ಬಹುಮತ ಸ್ಪಷ್ಟ ಬಹುಮತದ ಸರ್ಕಾರ ರಚನೆ ಅಸಾಧ್ಯ ಎಂದು ಹೇಳಲಾಗುತ್ತಿದೆ. ಹೀಗಾಗಿ ಜೆಡಿಎಸ್ ಪಕ್ಷದ ಸಹಾಯ ಹಸ್ತದತ್ತ ಚಿತ್ತ ನೆಟ್ಟಿದ್ದು ಒಳಗೊಳಗೆ ಕಸರತ್ತು ಶುರುವಾಗಿದೆ.


