Breaking News

ಮೂಡುಶೆಡ್ಡೆಯಲ್ಲಿ ಕಾರ್ಯಕರ್ತರ ಗಲಾಟೆ, 144 ನಿಷೇಧಾಜ್ಞೆ ಜಾರಿ: ಜೈನ್

 

ಮಂಗಳೂರು: ಮೂಡುಶೆಡ್ಡೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಕಾರಿಗೆ ಕಲ್ಲೆಸೆತ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಈ ಘಟನಾ ಸ್ಥಳವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಭೇಟಿ ನೀಡಿ, ಕಾವೂರು ಠಾಣೆ ವ್ಯಾಪ್ತಿಯಲ್ಲಿ 144 ಕಲಂ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಮೂಡುಬಿದಿರೆ ಮತಕ್ಷೇತ್ರ ವ್ಯಾಪ್ತಿಯ ಮೂಡುಶೆಡ್ಡೆ ಮತಗಟ್ಟೆಗೆ ಮಿಥುನ್ ರೈ ಬಂದಿದ್ದರು, ಅಲ್ಲಿಂದ ವಾಪಸ್ ಆಗುವಾಗ ಅಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ, ಮಿಥುನ್ ರೈ ಕಾರು ನಿಲ್ಲಿಸಿದ್ದು ಜೊತೆಗಿದ್ದ ಬೆಂಬಲಿಗರು ಕಾಂಗ್ರೆಸ್ ಗೆ  ಜೈಕಾರ ಹಾಕಿದ್ದಾರೆ. ಕೂಡಲೇ ಎರಡೂ ಕಡೆಯಲ್ಲಿ ಗುಂಪು ಜಮಾವಣೆ ಆಗಿದ್ದು, ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿಕೊಂಡಿದ್ದಾರೆ. ಈ ವೇಳೆ ಎರಡು ತಂಡಗಳ ಮಧ್ಯೆ ವಾಗ್ವಾದ, ತಳ್ಳಾಟ ನಡೆಯುತ್ತಿದ್ದಾಗಲೇ ಕಲ್ಲು ತೂರಾಟ ಆಗಿದ್ದು ಮೂವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕಲ್ಲಿನ ಏಟು ಬಿದ್ದು ಗಾಯಗೊಂಡಿದ್ದಾರೆ.

  1.  

ನಂತರ, ಸ್ಥಳದಲ್ಲಿ ಪೊಲೀಸರು ಜಮಾವಣೆಗೊಂಡು ಎರಡೂ ತಂಡಗಳು ಜಗಳ ನಡೆಸದಂತೆ ತಡೆದಿದ್ದಾರೆ. ಕಾರ್ಯಕರ್ತರ ರಂಪಾಟದ ವೇಳೆ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.

ಕಮಿಷನರ್ ಕುಲದೀಪ್ ಜೈನ್ ಅವರು ಮಾತನಾಡಿ, ಘಟನೆ ಹಿನ್ನೆಲೆಯಲ್ಲಿ ಕಾವೂರು ಠಾಣೆ ವ್ಯಾಪ್ತಿಗೆ 144 ಸೆಕ್ಷನ್ ನಿಷೇಧಾಜ್ಷೆ ಜಾರಿ ಮಾಡಲಾಗಿದೆ.  ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದೇನೆ. ಮೂಡುಶೆಡ್ಡೆಗೆ ಹೊರಭಾಗದ ಜನರು ಬಾರದಂತೆ ಚೆಕ್ ಪೋಸ್ಟ್ ಹಾಕಲಾಗಿದೆ. ಕಾರ್ಯಕರ್ತರು ಘೋಷಣೆ ಕೂಗಿದ ಕಾರಣಕ್ಕೆ ಸಮಸ್ಯೆ ಉಂಟಾಗಿದೆ ಎಂಬ ಮಾಹಿತಿ ಇದೆ.‌ ತನಿಖೆ ನಡೆಸುತ್ತೇವೆ, ಮೂವರು ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಲ್ಪ ಗಾಯವಾಗಿದೆ. ಒಬ್ಬರು ಪೊಲೀಸ್ ಸಿಬ್ಬಂದಿಗೂ ಕಲ್ಲೇಟಿನಿಂದ ಗಾಯ ಆಗಿದೆ. ಉದ್ರಿಕ್ತ ಗುಂಪನ್ನು ಪೊಲೀಸರು ಚದುರಿಸಿದ್ದಾರೆ, ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ತಿಳಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com