
ಶಿರಸಿ: ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವೆಂಕಟೇಶ ಹೆಗಡೆ ಹೊಸಬಾಳೆ ಅವರು ಕಾಂಗ್ರೆಸ್ ಹಿರಿಯ ನಾಯಕರ ಸೂಚನೆ ಮೇರೆಗೆ ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಅವರ ಜತೆ ಸಮಾಲೋಚಿಸಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜೊತೆ ದೂರವಾಣಿ ಮೂಲಕ ಮಾತಾಡಿದ ಬಳಿಕ ಅವರು ನಾಮಪತ್ರ ವಾಪಸ್ ಪಡೆದಿರುವುದಾಗಿ ತಿಳಿಸಿದ್ದಾರೆ.
ಪಕ್ಷದ ಆದೇಶ ಪಾಲಿಸಲು, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರಿಗೆ ನನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಹಾಗೂ ಪಕ್ಷದ ಗೆಲುವಿಗಾಗಿ ನಿರಂತರವಾಗಿ ಶ್ರಮಿಸುವುದಾಗಿ ತಿಳಿಸಿದರು.
ಕುಮಟಾ ಕ್ಷೇತ್ರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೂರವಾಣಿ ಕರೆ ಮಾಡಿ ನಾಮಪತ್ರ ಹಿಂಪಡೆಯುವಂತೆ ತಿಳಿಸಿದ್ದು, ಎಂ.ಎಲ್.ಸಿ. ಅಥವಾ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಕೊಡುವುದಾಗಿಯೂ ಭರವಸೆ ನೀಡಿದ್ದಾರೆ, ಆದರೆ ನಾನು ರಾಜಕೀಯವಾಗಿಯೇ ನಿವೃತ್ತಿ ಪಡೆಯಲು ಬಯಸಿದ್ದೇನೆ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಪಕ್ಷಕ್ಕಾಗಿ ಹಲವು ವರ್ಷದಿಂದ ನಾನು ಮತ್ತು ನಮ್ಮ ಕುಟುಂಬದವರು ಕೆಲಸ ಮಾಡಿದ್ದೇವೆ. ಆದರೆ ಪಕ್ಷ ಟಿಕೆಟ್ ನೀಡದಿರುವುದು ನೋವುಂಟು ಮಾಡಿದೆ. ಪಕ್ಷದ ನಿರ್ಧಾರದಿಂದ ಬಹಳಷ್ಟು ನೊಂದಿದ್ದೇನೆ‘ ಎಂದರು.
‘ರಾಜಕೀಯ ನಿವೃತ್ತಿ ಪಡೆದ ಮೇಲೆ ಯಾರೊಬ್ಬರಿಗೂ ಬೆಂಬಲಿಸುವ ಪ್ರಮೇಯವೇ ಇಲ್ಲ. ನಮ್ಮ ಬೆಂಬಲಿಗರು ಯಾರನ್ನಾದರೂ ಬೆಂಬಲಿಸಲು ಸ್ವತಂತ್ರರು. ಪುತ್ರ ರವಿಕುಮಾರ್ ರಾಜಕೀಯ ನಿರ್ಧಾರ ಕೈಗೊಳ್ಳಲು ಸ್ವತಂತ್ರರು‘ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.


