
ಮಂಗಳೂರು(ಸುಳ್ಯ) : ರಾಜಕೀಯ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಲಿದ್ದು, ಮತ್ತೆ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಕೂಡ ಹೋಗುತ್ತೇನೆ ಎಂದು ಸಚಿವ ಎಸ್.ಅಂಗಾರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜಕೀಯ ನಿವೃತ್ತಿ ಘೋಷಣೆಯ ಮಾತನ್ನು ವಾಪಸ್ ಪಡೆಯುತ್ತೇನೆ. ಬಿಜೆಪಿ ಅಭ್ಯರ್ಥಿ ಘೋಷಣೆ ವೇಳೆ ಅಭ್ಯರ್ಥಿ ಸ್ಥಾನ ಸಿಗದೇ ನೊಂದು ನೋವಿನಿಂದ ರಾಜಕೀಯ ನಿವೃತ್ತಿ ಹೇಳಿಕೆ ನೀಡಿದ್ದೆ. ಆದರೆ ಅದರ ನಂತರ ನನ್ನ ನಿರ್ಧಾರದಿಂದ ಹಿಂದೇ ಸರಿದಿದ್ದೇನೆ. ಬಿಜೆಪಿ ಪಕ್ಷದಲ್ಲಿದ್ದುಕೊಂಡು ಪಕ್ಷದ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಗೆಲುವಿಗೆ ಸಂಪೂರ್ಣವಾಗಿ ತೊಡಗಿಕೊಂಡು ಪೂರಕ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
7 ಬಾರಿ ಸ್ಪರ್ಧೆ ಮಾಡಿದಾಗಲೂ ನಾನೆಂದೂ ನನಗೆ ಟಿಕೆಟ್ ಕೊಡಿ ಎಂದು ಕೇಳಿರಲಿಲ್ಲ. ಟಿಕೆಟ್ ಗಾಗಿ ಲಾಬಿ ಮಾಡಿದವವನು ಅಲ್ಲ. ಇಷ್ಟು ಬಾರಿಯೂ ಪಕ್ಷವೇ ನನಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತ್ತು. ನನ್ನ ಸಾರ್ವಜನಿಕ ಜೀವನದಲ್ಲಿ ನಾನೆಂದೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡಿಡಿಲ್ಲ. ನನ್ನ ಜೀವನ ತೆರೆದ ಪುಸ್ತಕ ಯಾರು ಬೇಕಾದರೂ ಓದಬಹುದು ಎಂದು ತಿಳಿಸಿದರು.
ಈ ಬಾರಿಯೂ ನಾನು ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಎಂಬ ಹೇಳಿಕೆ ಕೊಟ್ಟದ್ದೆ. ಬದಲಾವಣೆ ಮಾತುಕತೆ ಇಲ್ಲದ ಕಾರಣ ನಾನು ನಿರಾಳನಾಗಿದ್ದೆ. ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ವೇಳೆ ನನಗೆ ಅವಕಾಶ ನೀಡದೇ ಇರುವುದು ಗೊತ್ತಾಯಿತು. ಇದರಿಂದಾಗಿ ಮನಸ್ಸಿಗೆ ತೀವ್ರ ಆಘಾತ ಆಯಿತು. ಯಾರಲ್ಲಿ ಏನು ಹೇಳಬೇಕೆಂದೂ ಹೊಳೆಯಲಿಲ್ಲ ಹೀಗಾಗಿ ಬುಧವಾರ ಬೆಳಿಗ್ಗೆ ನಾನು ಗೊಂದಲದಿಂದಾಗಿ ನನ್ನ ನಿರ್ಧಾರವನ್ನು ಪ್ರಕಟ ಮಾಡಿದೆ ಎಂದ ತಿಳಿಸಿದರು.
ನಂತರ ನನ್ನ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಚರ್ಚೆ ಆರಂಭವಾಗಿರುವುದನ್ನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಇದರಿಂದಾಗಿ ನನ್ನ ಕ್ಷೇತ್ರದ ಮತದಾರರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ತಪ್ಪು ಸಂದೇಶ ಹೊಗುತ್ತಿರುವುದು ಸರಿಯಲ್ಲ. ನಿಜ ಸಂಗತಿ ತಿಳಿಸುವುದು ಅಗತ್ಯ ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.


