Breaking News

ಚುನಾವಣೆ ಚಟುವಟಿಕೆ ಮೇಲೆ ನಿಗಾ ಇಡಿ: ಜಿಲ್ಲಾಧಿಕಾರಿ ರವಿಕುಮಾರ್

 

ಮಂಗಳೂರು: ಚುನಾವಣಾ ಕಾರ್ಯಕ್ಕೆ ನಿಯೋಜಿತ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಗೆ ಅಗತ್ಯ ಇರುವ ಪೂರ್ವ ಸಿದ್ಧತೆಗಳ ಬಗ್ಗೆ ಗಮನಹರಿಸಿ, ಅವುಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ನಿರ್ದೇಶನ ನೀಡಿದರು.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆಗೆ ನಿಯೋಜನೆಗೊಂಡಿರುವ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  1.  

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಕರ್ತವ್ಯ ಹಾಗೂ ತಾವು ವಹಿಸಬೇಕಾದ ಪಾತ್ರದ ಬಗ್ಗೆ ತಿಳಿದುಕೊಂಡಿರಬೇಕು, ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲೂ ಪ್ರಚಾರ ಕಾರ್ಯಗಳು ಬಿರುಸು ಪಡೆಯುತ್ತವೆ. ಈ ಸಂಬಂಧ ನಿಯೋಜಿತ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಆಗ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳ ಸಿದ್ಧತೆಯನ್ನು ಈಗಲೇ ಮಾಡಿಟ್ಟುಕೊಳ್ಳಬೇಕು ಎಂದರು.

ಸಿ ವಿಜಿಲ್, ಸುವಿಧಾ ಸೇರಿದಂತೆ ಮುಖ್ಯವಾಗಿ ತಕ್ಷಣದಲ್ಲೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತ ವಹಿಸಬೇಕು. ಯಾವುದೇ ದೂರು ದಾಖಲಾದ ಕೂಡಲೇ ಅದಕ್ಕೆ ಪ್ರತಿಕ್ರಿಯೆ ನೀಡಲು ಸನ್ನದ್ಧರಾಗಬೇಕು, ಮಂಗಳೂರು ವಾಯು ಹಾಗೂ ಜಲ ಮಾರ್ಗ ಹೊಂದಿರುವ ಕಾರಣ ಹೊರಗಿನಿಂದ ಬರಬಹುದಾದ ಅಕ್ರಮಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್, ಡಿಸಿಪಿ ಅಂಶು ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ ಸೇರಿದಂತೆ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಸಭೆಯಲ್ಲಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com