Breaking News

ಕಣಚೂರು ವೈದ್ಯಕೀಯ ಕಾಲೇಜಿನ ಹೆಸರಲ್ಲಿ ವಂಚನೆ: ನೋಯ್ಡಾದ ಇಫ್ತಿಕಾರ್ ಆರೆಸ್ಟ್

 

ಮಂಗಳೂರು: ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿನ ಹೆಸರಿನಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದ ಪ್ರಕರಣದಲ್ಲಿ ನೋಯ್ಡಾ ಮೂಲದ ಆರೋಪಿ ಇಫ್ತಿಕಾರ್ ಅಹ್ಮದ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧನ ಮಾಡಿದ್ದಾರೆ.

ಬೀದರ್ ಮೂಲದ ಶಶಿಕಾಂತ್ ದೀಕ್ಷಿತ್ ಎಂಬುವವರು ತನ್ನಿಂದ 22.5 ಲಕ್ಷ ರೂ. ಪಡೆದು ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಇಫ್ತಿಕಾರ್ ಅಹ್ಮದ್ ಮತ್ತಿತರರು ಸೇರಿ ಮೋಸ ಮಾಡಿದ್ದಾಗಿ ಉಳ್ಳಾಲ ಠಾಣೆಗೆ ದೂರು ನೀಡಿದ್ದರು.

  1.  

ಮಾರ್ಚ್ 5 ರಂದು ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೇ ಸಂದರ್ಭದಲ್ಲಿ ಮುಂಬೈನಲ್ಲಿ ಮೆಡಿಕಲ್ ಪ್ರವೇಶಕ್ಕೆ ಸೀಟು ಕೊಡಿಸುವ ಹೆಸರಲ್ಲಿ ಮೋಸ ಮಾಡಿದ ಪ್ರಕರಣದಲ್ಲಿ ಇಫ್ತಿಕಾರ್ ಅಹ್ಮದ್ ನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು.

ಇದೀಗ ಉಳ್ಳಾಲ ಪೊಲೀಸರು ಆರೋಪಿ ಇಫ್ತಿಕಾರ್ ಅಹ್ಮದ್ ನನ್ನು ಬಾಡಿ ವಾರೆಂಟ್ ಪಡೆದು ಮುಂಬೈನಿಂದ ಮಂಗಳೂರಿಗೆ ಕರೆ ತಂದಿದ್ದಾರೆ.  ಇಫ್ತಿಕಾರ್ ಅಹ್ಮದ್ ಉತ್ತರ ಪ್ರದೇಶದ ನೋಯ್ಡಾ ನಿವಾಸಿ ಎಂದು ಗುರುತಿಸಲಾಗಿದೆ. ಈತ ದೇಶದಾದ್ಯಂತ ಮೆಡಿಕಲ್ ಸೀಟು ಲಾಬಿ ನೆಪದಲ್ಲಿ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಏಜನ್ಸಿ ಹೆಸರಲ್ಲಿ ಮೋಸ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಇಫ್ತಿಕಾರ್ ನನ್ನು ಮುಂಬೈನಿಂದ ಕರೆ ತಂದ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಣಚೂರು ಮೆಡಿಕಲ್ ಕಾಲೇಜು ಹೆಸರಿನಲ್ಲಿ ವಿಶಾಖಪಟ್ಟಣ ಮೂಲದ ಮತ್ತೊಬ್ಬ ವ್ಯಕ್ತಿಗೂ ಇದೇ ರೀತಿ ಮೋಸ ಮಾಡಲಾಗಿತ್ತು. ಮೆಡಿಕಲ್ ಸೀಟು ಕೊಡಿಸುತ್ತೇವೆಂದು 50 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com