Breaking News

ನರೇಗಾದಿಂದ ಕೊಪ್ಪ ಗ್ರಾಮದಲ್ಲಿ ಬೂದು ನೀರು ನಿರ್ವಹಣೆಗೆ ಶಾಶ್ವತ ಪರಿಹಾರ

 

ಕಾರವಾರ: ಜಿಲ್ಲೆಯ ಮುಂಡಗೋಡ ತಾಲೂಕಿನ ಇಂದೂರು ಗ್ರಾಮ ಪಂಚಾಯಿತಿ ಕೊಪ್ಪ ಗ್ರಾಮದಲ್ಲಿ ಬೂದು ನೀರಿನ ನಿರ್ವಹಣೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಸ್ವಚ್ಚ ಭಾರತ್ ಮೀಷನ್ ಯೋಜನೆ ಅಡಿ 15 ಲಕ್ಷ ವೆಚ್ಚದಲ್ಲಿ ದ್ರವ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡಿದೆ.

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾದಡಿ ಬಚ್ಚಲುಗುಂಡಿ ನಿರ್ಮಾಣ, ಪೌಷ್ಠಿಕ ಕೈತೋಟ ಹಾಗೂ ಸ್ವಚ್ಚ ಭಾರತ್ ಮೀಷನ್ ದಡಿ ಶೌಚಾಲಯದಂತಹ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರು ಸಹ ಅಧಿಕ ಮನೆಗಳಿರುವ ಗ್ರಾಮಗಳಲ್ಲಿ ಚರಂಡಿ ನೀರಿನ ಸಮಸ್ಯೆಗೆ ಮುಕ್ತಿ ನೀಡಲು ಬೂದು ನೀರಿನ ನಿರ್ವಹಣಾ ಘಟಕ ನಿರ್ಮಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಿದೆ. ಇನ್ನು ಈ ನೀರಿನಿಂದ ಮರುಬಳಕೆಯು ಸಾಧ್ಯವಾಗಿದ್ದು ರೈತರ ಅನುಕೂಲಕ್ಕೆ ಸಾಕ್ಷಿಯಾಗಿದೆ.

ಜಿಲ್ಲೆಯಲ್ಲಿ ಬೂದು ನೀರಿನ ನಿರ್ವಹಣಾ ಘಟಕಕ್ಕೆ ಆಯ್ಕೆಯಾದ ಕೊಪ್ಪ ಗ್ರಾಮದಲ್ಲಿ ಸರಿಸುಮಾರು 185 ಮನೆಗಳಿದ್ದು, 1150 ಜನಸಂಖ್ಯೆ ಹೊಂದಿದೆ. ಇನ್ನು ಇಲ್ಲಿನ ಚರಂಡಿ ನೀರು ರೈತರ ಹೊಲದ ಮೂಲಕ ಕೆರೆಯನ್ನು ಸೇರುತಿತ್ತು. ಇನ್ನು ಈ ಸಮಸ್ಯೆಯಿಂದ ಸುತ್ತಲಿನ ರೈತರ ಹೊಲಗದ್ದೆಗಳಿಗೂ ಸಹಿತ ಸಂಕಷ್ಟ ಎದುರಾಗಿತ್ತು. ಇದೀಗ ವೈಜ್ಞಾನಿಕ ಪ್ರಕ್ರಿಯೆಯಿಂದಾಗಿ ಘಟಕದ ನಿರ್ಮಾಣವು ಪರಿಹಾರ ಸೂಚಿಸಿದೆ.

ಘಟಕ ನಿರ್ಮಾಣದ ಆಯ್ಕೆ:  ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಬೂದು ನೀರು ನಿರ್ವಹಣೆಗಾಗಿ ಸರ್ವೇ ಕೈಗೊಂಡಾಗ ಸಮಸ್ಯೆಯಿರುವ ಒಂದು ಸ್ಥಳವನ್ನು ಗುರುತಿಸಲಾಯಿತು. ಸದರಿ ಜಾಗವು ಫಿಲಿಪ್ ಥಾಮಸ್ ಪಾರೆಲ್ ರವರ ಖಾಸಗಿ ತೋಟದ ಮೂಲಕ ಕೆರೆಯನ್ನು ಸೇರುವುದರಿಂದ ಸದರಿಯವರ ತೋಟದ ಜಾಗವನ್ನೆ ಚರಂಡಿಯಲ್ಲಿ ಸಂಸ್ಕರಿಸುವ ವಿಧಾನ ನಿರ್ಮಾಣ ಮಾಡಿ ಬೂದು ನೀರು ಸಂಸ್ಕರಿಸಲು ಸೊಕ್ತವೆಂದು ತಿರ್ಮಾನಿಸಲಾಯಿತು. ಸದರಿ ಜಾಗದ ಮಾಲಕರಾದ ಪಿಲೀಪ್ ಥಾಮಸ್ ಪಾರೆಲ್‌ರವರಿಗೆ ಸಮಸ್ಯೆಯ ಬಗ್ಗೆ ತಿಳಿಸಲಾಯಿತು

  1.  

ಚರಂಡಿಯಲ್ಲಿ ಸಂಸ್ಕರಿಸುವ ವಿಧಾನ ಮತ್ತು ಸಂಸ್ಕರಣೆ: ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಬೂದು ನೀರು ನಿರ್ವಹಣೆಗೆ 185 ಮನೆಗಳು ಹಾಗೂ 1150 ಜನಸಂಖ್ಯೆಯಿಂದ ಉತ್ಪತ್ತಿಯಾಗುವ 47.43 ಕೆಎಲ್‌ಡಿ ನೀರನ್ನು ಇನ್ಲೈನ್  ಟ್ರಿಟ್‌ಮೆಂಟ್ ಮಾದರಿಯಲ್ಲಿ ಬರುವ ಸಿಲ್ಟ್ ಟ್ರ್ಯಾಪ್, ಪ್ಲಾಂಟೆಡ್ ಗ್ರಾವೆಲ್ ಫಿಲ್ಟರ್ ಮೀಡಿಯಾ ಮತ್ತು ಕನ್ಸ್ಟ್ರೇಡ್ ವೆಟ್‌ಲಾಂಡ, ಫಿಲ್ಟರ್ ಮೂಲಕ ಬೂದು ನೀರು ಸಂಸ್ಕರಿಸಲು ಕಾಮಗಾರಿ ಪೂರ್ಣಗೋಳಿಸಲಾಗಿದೆ. ಹೀಗೆ ಸಂಸ್ಕರಿಸಿದ ನೀರು ಸ್ವಲ್ಪ ಪ್ರಮಾಣದಲ್ಲಿ ತೋಟದಲ್ಲಿ ಇಂಗಿ ಬಾಕಿ ಉಳಿದ ನೀರು ಕೆರೆಗೆ ಸೇರಲಿದೆ.

ಗ್ರಾಮಸ್ಥ ಫಿಲಿಪ್ ಥಾಮಸ್ ಪಾರೆಲ್‌ ಅವರು ಹೇಳುವಂತೆ ತಮ್ಮ ಜಾಗದಲ್ಲಿ ಈ ಮೊದಲು ಊರಿನಿಂದ ಹರಿದು ಬರುವ ಕಲುಷಿತ ನೀರು ಹಾಗೂ ಇತರೆ ತ್ಯಾಜ್ಯಗಳು  ತಮ್ಮ ತೋಟದಲ್ಲಿ ಬಿದ್ದು ನಿರ್ವಹಣೆಗೆ ತುಂಬಾ ಸಮಸ್ಯೆಯಾಗುತಿತ್ತು. ಚರಂಡಿಯಲ್ಲಿ ಸಂಸ್ಕರಿಸುವ ವಿಧಾನ ನಿರ್ಮಾಣದಿಂದ ಚರಂಡಿಯಲ್ಲಿ ಹರಿಯುವ ನೀರು ವ್ಯರ್ಥವಾಗದೆ ನಮ್ಮ ತೋಟದಲ್ಲಿ ಇಂಗುವುದರಿಂದ 6ಎಕರೆ ತೋಟಕ್ಕೆ ಹಾಗೂ ಅಕ್ಕ ಪಕ್ಕದ 5ಎಕರೆ ಅಡಿಕೆ ತೋಟಕ್ಕೆ ಅನುಕೂಲವಾಗಿದೆ. ಕೊಳಚೆ ಮುಕ್ತ ಗ್ರಾಮ ಮಾಡಲು ಅನುವು ಮಾಡಿಕೊಡಲಾಗಿದೆ ಎಂದರು.

9 ಕಡೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಘಟಕ: ಜಿಲ್ಲೆಯಲ್ಲಿ ಇವರೆಗೂ ಸ್ಥಳ ಲಭ್ಯತೆ ಇರುವ 9 ಕಡೆಗಳಲ್ಲಿ ಸಮುದಾಯ ಹಂತದ ಬೂದು ನೀರು ನಿರ್ವಹಣಾ ಘಟಕವನ್ನು ಕೈಗೆತ್ತಿಗೊಂಡಿದ್ದು ಕಾಮಗಾರಿಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಸ್ವಚ್ಚ ಭಾರತ ಮಿಷನ್‌ ಹಂತ -2 ರ ಯೋಜನೆ ಅಡಿ ಮನೆಯ ಹಂತದಲ್ಲಿ ಉತ್ಪತ್ತಿಯಾಗುವ ಬೂದು ನೀರು ಹಾಗೂ ಕಪ್ಪು ನೀರನ್ನು ಸಂಸ್ಕರಿಸುವ ಘಟಕವನ್ನು ಅನುಷ್ಠಾನ ಮಾಡಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಬೂದು ನೀರು ನಿರ್ವಹಣೆಗಾಗಿ ಮನೆಯ ಹಂತದಲ್ಲಿ ಬಚ್ಚಲು ಗುಂಡಿ ನಿರ್ಮಾಣಕ್ಕಾಗಿ ನರೇಗಾ ಯೋಜನೆ ಅಡಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಸಮುದಾಯ ಹಂತದಲ್ಲಿ ಬೂದು ನೀರು ನಿರ್ವಹಣಾ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ  ಜಿಲ್ಲೆಯಲ್ಲಿ ಸ್ಥಳದ ಲಭ್ಯತೆ ನೋಡಿಕೊಂಡು ಇನ್ನು ಹೆಚ್ಚಿನ ಕಾಮಗಾರಿಯನ್ನು ಅನುಷ್ಟಾನಗೊಳಿಸಲು ಯೋಜನೆ ಮಾಡಲಾಗುವುದು. ಈ ಮೂಲಕ ಗ್ರಾಮ ಪಂಚಾಯತಗಳನ್ನು ಕೊಳಚೆ ಮುಕ್ತ ಗ್ರಾಮಗಳನ್ನಾಗಿಸಲು ಸಾರ್ವಜನಿಕರು ಕೈಜೊಡಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಖಂಡೂ ಹೇಳಿದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com