Breaking News

ನೀತಿ ಸಂಹಿತೆ ನೆಪ– ಧಾರ್ಮಿಕ ಕಾರ್ಯಕ್ರಮದ ಬ್ಯಾನರ್, ಫ್ಲೆಕ್ಸ್ ತೆರವು ಅಕ್ಷಮ್ಯ: ಖಾದರ್ ಗರಂ

 

ಮಂಗಳೂರು:  ಚುನಾವಣಾ ನೀತಿ ಸಂಹಿತೆ ಅನುಷ್ಠಾನಗೊಳಿಸುವ ಭರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್‌ಗಳನ್ನು ತೆರವುಗೊಳಿಸಿರುವುದು ಸರಿಯಲ್ಲ.  ಬ್ಯಾನರ್‌ನಲ್ಲಿ ರಾಜಕಾರಣಿಗಳ, ಜನಪ್ರತಿನಿಧಿಗಳ ಭಾವಚಿತ್ರ, ಅನುದಾನ ಇತ್ಯಾದಿ ವಿವರಗಳಿದ್ದರೆ ತೆರವುಗೊಳಿಸಲಿ. ಅದು ಬಿಟ್ಟು ಕೇವಲ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್‌ಗಳನ್ನು ತೆರವುಗೊಳಿಸುತ್ತಿರುವುದು ಅಕ್ಷಮ್ಯ ಎಂದು ಶಾಸಕ ಯು.ಟಿ. ಖಾದರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿದರು. 

ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಜನಸಾಮಾನ್ಯರಿಗೆ ತೊಂದರೆ ಕೊಡುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ನೀತಿ ಸಂಹಿತೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕು. ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಮಾಹಿತಿ ಕೊರತೆ ಇರುವುದರಿಂದಲೇ ಈ ಸಮಸ್ಯೆ ಉಂಟಾಗಿದೆ. ಗೊಂದಲ ನಿರ್ಮಾಣ ಆಗಿದೆ. ಈ ಬಗ್ಗೆ ಮಾಹಿತಿ ಪಡೆಯಲು ಮತ್ತು ನಿಯಮ ಮೀರಿ ಕಾರ್ಯಾಚರಿಸುವ ಅಧಿಕಾರಿ, ಸಿಬ್ಬಂದಿ ವರ್ಗದ ವಿರುದ್ಧ ದೂರು ಸಲ್ಲಿಸಲು ನಿಯಂತ್ರಣ ಕೊಠಡಿ ತೆರೆಯಬೇಕು ಎಂದು ತಿಳಿಸಿದರು. 

ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಸಮಸ್ಯೆಗೆ ಕ್ಷಿಪ್ರಗತಿಯಲ್ಲಿ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳಿಗೆ ಸಾಧ್ಯವಾಗುತ್ತಿಲ್ಲ.  ಮುಖ್ಯಮಂತ್ರಿ ಸಹಿತ ಸಚಿವರು ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದರೇ ಹೊರತುನೀತಿ ಸಂಹಿತೆ ಜಾರಿಗೆ ಮುನ್ನ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಿಲ್ಲ. ಸರಕಾರದ ನಿರ್ಲಕ್ಷ್ಯದಿಂದ ಇದೀಗ ಜನಸಾಮಾನ್ಯರು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಶೀಘ್ರ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು  ಒತ್ತಾಯಿಸಿದರು. ಜಿಲ್ಲೆಯ 8 ಕ್ಷೇತ್ರಗಳ ಪೈಕಿ 5 ಸ್ಥಾನಗಳಿಗೆ ಪಕ್ಷ ಈಗಾಗಲೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನೂಳಿದ 3 ಕ್ಷೇತ್ರಗಳಿಗೆ ಶೀಘ್ರ ಅಭ್ಯರ್ಥಿಗಳನ್ನು ಘೋಷಿಸಲಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಟಿಕೆಟ್ ಆಕಾಂಕ್ಷಿಗಳು, ಅಭ್ಯರ್ಥಿಗಳು ಒಟ್ಟಾಗಬೇಕು. ತನ್ನ ವಿರುದ್ಧ ಯಾರೇ ಕಣಕ್ಕಿಳಿದರೂ ಕೂಡ ಮುಕ್ತವಾಗಿ ಸ್ವಾಗತಿಸುವೆ.  ಈಗಾಗಲೆ ಪಕ್ಷದ ಕಾರ್ಯಕರ್ತರು ನನ್ನ ಗೆಲುವಿಗೆ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ ಎಂದರು. 

ಬಿಜೆಪಿ ಸರ್ಕಾರದ ಷಡ್ಯಂತ್ರ: ರಾಜ್ಯ ಬಿಜೆಪಿ ಸರಕಾರ ಉದ್ದೇಶ ಪೂರ್ವಕವಾಗಿ ಕೊನೆಯ ಕ್ಷಣದಲ್ಲಿ ಮುಸ್ಲಿಮರ 2 ಬಿ ಮೀಸಲಾತಿ ಜಾರಿಗೊಳಿಸಲು ಮುಂದಾಗಿವೆ. ಈ ಹಿಂದೆ ಎಲ್ಲಾ ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್‌ಗೆ ಮೊರೆ ಹೋದವರು ಕೂಡ ಇದೇ ಬಿಜೆಪಿಯವರು. ಇವರಿಗೆ ಮುಸ್ಲಿಮರು ನೆಪಮಾತ್ರ. ಭವಿಷ್ಯದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರ ಮೀಸಲಾತಿಯನ್ನು ಕಸಿಯುವುದು ಇವರ ಷಡ್ಯಂತ್ರ. ಆದರೆ, ಈ ವಿಚಾರದಲ್ಲಿ ಬಿಜೆಪಿಗರು ಯಶಸ್ಸು ಕಾಣುವುದಿಲ್ಲ. ರಾಜ್ಯದ ಜನರು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದರು. ರಾಜಕೀಯ ಮೀಸಲಾತಿಯಲ್ಲೇ ಬಿಜೆಪಿ ಗೊಂದಲ ಸೃಷ್ಟಿಸಿದೆ. ಅದನ್ನು ನಿವಾರಿಸಲು ಇನ್ನೂ ಈ ಸರಕಾರಕ್ಕೆ ಆಗಿಲ್ಲ. ಇದರಿಂದ ಕಳೆದ ಒಂದೂವರೆ ವರ್ಷದಿಂದ ಸ್ಥಳೀಯಾಡಳಿತದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಪ್ರಕ್ರಿಯೆ ಆಗಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡುವುದಾದರೆ ದಲಿತರಿಗೆ ಮೀಸಲಾತಿಯಲ್ಲಿ ಹೆಚ್ಚಿನ ಪಾಲು ನೀಡಬೇಕು. ಆದರೆ ಅದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡುತ್ತಿಲ್ಲ. ಒಟ್ಟಿನಲ್ಲಿ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಖಾದರ್ ಆರೋಪಿಸಿದರು.

  1.  

 ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಖಂಡರಾದ ಸುಹೈಲ್ ಕಂದಕ್, ಉದಯ್ ಆಚಾರ್, ನಝೀರ್ ಮಠ ಇದ್ದರು.

 

 

 

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com